ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪ ಆಯ್ಕೆ

CTD PR.G.PARAMESHVARAPPA----
Published on

ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಮಾ.9ರಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊ.ಜಿ. ಪರಮೇಶ್ವರಪ್ಪ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆ ಮಾಡಿದೆ.

ಈಗಾಗಲೇ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಪ್ರಚಾರ ಭಿತ್ತಿ ಪತ್ರಗಳನ್ನು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಡಾ.ಎಂ. ಚಂದ್ರಪ್ಪ ಬಿಡುಗಡೆಗೊಳಿಸಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಹೊಳಲ್ಕೆರೆ ತಾಲೂಕು ಕಸಾಪ ಅಧ್ಯಕ್ಷ ಎಂ. ಶಿವಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಳೆಗನ್ನಡ ಸಾಹಿತಿ ಎಂದೇ ಖ್ಯಾತರಾಗಿರುವ ಪರಮೇಶ್ವರಪ್ಪ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಹಿರಿಯೂರು ತಾಲೂಕು ಹರ್ತಿಕೋಟೆ ಸಮೀಪದ ಕಪಿಲೆಹಟ್ಟಿಯಲ್ಲಿ 1950 ಅಕ್ಟೋಬರ್ 15 ರಂ ದು ಜನಿಸಿದರು.

ಮೈಸೂರು ವಿವಿ ಕನ್ನಡ ಎಂಎ ಪದವೀಧರರಾಗಿರುವ ಇವರು 1980ರಿಂದ 30 ವರ್ಷ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 2010ರಲ್ಲಿ ನಿವೃತ್ತರಾಗಿದ್ದಾರೆ. ಬೀದರ್, ಮಾಯಕೊಂಡ, ಅಥಣಿ, ಚಳ್ಳಕೆರೆ ಮತ್ತು ಚಿತ್ರದುರ್ಗದ ಕಲಾ ಕಾಲೇಜುಗಳಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಕಲಾಸಿರಿ, ಸಾಹಿತ್ಯ ಸಂಶೋಧನೆ, ಮನಸ್ವಿ, ಬುಡಕಟ್ಟು ಕಥನಗಳು, ವದ್ದೀಕೆರೆ ಸಿದ್ದೇಶ್ವರ ಚರಿತೆ, ವೀರಕರಿಯಣ್ಣ ಇವರ ಪ್ರಮುಖ ಕೃತಿಗಳಾಗಿವೆ. ಚದುರಿದ ಚಿಂತನೆಗಳು ಮತ್ತು ವರ್ತಮಾನದ ಜನರ ಆಲೋಚನೆಗಳು ಎಂಬ ಎರಡು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಬುಡ ಕಟ್ಟುಗಳ ಕಥೆಗಳನ್ನು ಭಾಮಿನಿ ಷಟ್ಪದಿಯಲ್ಲಿ ಕವನ ರೂಪದಲ್ಲಿ ರಚಿಸಿರುವುದು ಇವರ ವಿಶೇಷ. ನಾನಾ ಕನ್ನಡ ಸಂಘಟನೆಗಳು ಇವರ ಸಾಹಿತ್ಯ ಸೇವೆ ಗುರುತಿಸಿ ಗೌರವಿಸಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net