ಜಿಲ್ಲಾ ಸಹಕಾರ ಬ್ಯಾಂಕ್ 13.48 ಕೋಟಿ ರೂ. ನಿವ್ವಳ ಗಳಿಸಿದೆ: ಸೋಮನಹಳ್ಳಿ ನಾಗರಾಜು

ಜಿಲ್ಲಾ ಸಹಕಾರ ಬ್ಯಾಂಕ್ 13.48 ಕೋಟಿ ರೂ. ನಿವ್ವಳ ಗಳಿಸಿದೆ: ಸೋಮನಹಳ್ಳಿ ನಾಗರಾಜು
Published on

ಹಾಸನ: 1953ರಲ್ಲಿ ಕೇವಲ 8.53 ಲಕ್ಷ ರೂ. ಬಂಡವಾಳದೊಂದಿಗೆ ಆರಂಭವಾದ ಜಿಲ್ಲಾ ಸಹಕಾರಿ ಬ್ಯಾಂಕ್ ಇಂದು 13.48 ಕೋಟಿ ರೂ. ನಿವ್ವಳ ಲಾಭದಲ್ಲಿದ್ದು, ಯಾವ ಅವ್ಯವಹಾರ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಬ್ಯಾಂಕ್ ಕುರಿತು ಯಾವುದೇ ರೀತಿಯ ಆಕ್ಷೇಪಣೆಗಳಿದ್ದರೆ ನೇರವಾಗಿ ಭೇಟಿಯಾಗಿ ಪರಿಹಾರ ಕಂಡುಕೊಳ್ಳಬಹುದೆಂದು ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಅವರು ಹೇಳಿದರು.
ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 34 ಶಾಖೆಗಳನ್ನು ಹೊಂದಿರುವ ಸಹಕಾರ ಬ್ಯಾಂಕ್ ರೈತರ ಆರ್ಥಿಕ ಶ್ರೇಯೋಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡುತ್ತಿದೆ. 3023ರ ಮಾರ್ಚ್ ವರೆಗಿನ ಲೆಕ್ಕದ ಪ್ರಕಾರ 1836.14 ಕೋಟಿ ರೂ. ಸಾಲ ವಿತರಿಸಿದೆ. ಜಿಲ್ಲಾದ್ಯಂತ 4,58,289 ಗ್ರಾಹಕರನ್ನು ಹೊಂದಿದ್ದು, ನಿವ್ವಳ ಲಾಭ 13.48 ಕೋಟಿ ರೂ. ಇದೆ ಎಂದರು.
ಜಿಲ್ಲೆಯಲ್ಲಿರುವ 211 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 17,3617 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲವಾಗಿ 1079.23 ಕೋಟಿ ಮತ್ತು 1484 ರೈತರಿಗೆ ಮಧ್ಯಮಾವಧಿ ಸಾಲವಾಗಿ 87.43 ಕೋಟಿ ರೂ. ಸಾಲ ನೀಡಲಾಗಿದೆ. ಕೃಷಿಯೇತರ ಉದ್ದೇಶಗಳಿಗೆ 5.20 ಕೋಟಿ ರೂ., ಜಿಲ್ಲೆಯಲ್ಲಿ 18573 ಸ್ವಸಹಾಯ ಗುಂಪುಗಳನ್ನು ರಚಿಸಿದ್ದು, ಈ ಪೈಕಿ 4221 ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ 104.96 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಕಿರು ಸಾಲ ಯೋಜನೆಯಡಿ 96 ಜನರಿಗೆ 11.66 ಲಕ್ಷ ರೂ. ನೀಡಿದ್ದು, ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ 2021-22 ಮತ್ತು 2022-23ನೇ ಸಾಲಿನ ನಬಾರ್ಡ್ ಪರಿವೀಕ್ಷಣೆ ಹಾಗು ಆಡಿಟ್ ವರ್ಗೀಕರಣದಲ್ಲಿ ಎ ವರ್ಗ ಪಡೆದಿದೆ ಎಂದು ಹೇಳಿದರು.
ಬ್ಯಾಂಕ್‌ನ ವ್ಯವಹಾರವನ್ನು ಸಂಪೂರ್ಣವಾಗಿ ಕೋರ್ ತಂತ್ರಜ್ಞಾನದಡಿ ಗಣಕೀಕರಣಗೊಂಡಿದ್ದು, ಗ್ರಾಹಕರು ತಮ್ಮ ವ್ಯವಹಾರವನ್ನು ಯಾವುದೇ ಶಾಖೆಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ. ದೇಶಾದ್ಯಂತ ಹಣ ವರ್ಗಾವಣೆ ಮಾಡುವ ಆರ್‌ಟಿಜಿಎಸ್, ನೆಫ್ಟ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಹಾಗು 15 ಎಟಿಎಂ ಯಂತ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ.ಸಿ.ಸಿ. ಬ್ಯಾಂಕ್ ಮುಖ್ಯ ಕಾರ‌್ಯನಿವಹಣಾಧಿಕಾರಿ ಆರ್.ಜೆ. ಕಾಂತರಾಜು, ಮಾಜಿ ಅಧ್ಯಕ್ಷ ಹೂನ್ನವಳ್ಳಿ ಸತೀಶ್, ನಿರ್ದೇಶಕರಾದ ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಮ್, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net