ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 15.51 ಕೋಟಿ ರೂ. ಲಾಭ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 15.51 ಕೋಟಿ ರೂ. ಲಾಭ
Published on

ಹಾಸನ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ( ಎಚ್‌ಡಿಸಿಸಿ ಬ್ಯಾಂಕ್) 2023 -24ನೇ ಸಾಲಿನಲ್ಲಿ 15.51 ಕೋಟಿ ರೂ. ಲಾಭ ಗಳಿಸಿದ್ದು, ಎ ಗ್ರೇಡ್ ಬ್ಯಾಂಕ್ ಸ್ಥಾನ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಅವರು ಹೇಳಿದರು.
ಬ್ಯಾಂಕಿನ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ಶುಕ್ರವಾರ ನಡೆದ 2023 -24ನೇ ಸಾಲಿನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಭಾಂಶದಲ್ಲಿ ಷೇರುಗಳಿಗೆ ಶೇ. 6.50 ಡಿವಿಡೆಂಟ್ ನೀಡಲಾಗುವುದು. ಬ್ಯಾಂಕಿನ ಈ ವರ್ಷದ ವ್ಯವಹಾರದ ಬಗ್ಗೆ ರಾಜ್ಯ ಅಪೆಕ್ಸ್ ಬ್ಯಾಂಕ್ ವಿಶೇಷ ಬಹುಮಾನವನ್ನೂ ಘೋಷಣೆ ಮಾಡಿದೆ ಎಂದು ತಿಳಿಸಿದರು.
ತಾವು ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡಾಗ 434 ಕೋಟಿ ರೂ. ನೀಡುತ್ತಿದ್ದ ಕೃಷಿ ಸಾಲದ ಮೊತ್ತ ಬ್ಯಾಂಕ್ ಈಗ 1200 ಕೋಟಿ ರೂ.ಗೆ ಏರಿಕೆಯಾಗಿದ್ದು, ಜಿಲ್ಲೆಯ ಯಾವ ತಾಲೂಕುಗಳಿಗೂ ಸಾಲ ನೀಡಿಕೆಯಲ್ಲಿ ತಾರತಮ್ಯ ಮಾಡಿಲ್ಲ. ಅರಸೀಕೆರೆ ತಾಲೂಕು ಒಂದಕ್ಕೇ 200 ಕೋಟಿ ರೂ ಕೃಷಿ ಸಾಲ ನೀಡಲಾಗಿದೆ ಎಂದು ಹೇಳಿದರು.
ಬ್ಯಾಂಕಿನ ಮಾಜಿ ಅಧ್ಯಕ್ಷ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ, 80 ರ ದಶಕದಲ್ಲಿ ಎಚ್‌ಡಿಸಿಸಿ ಬ್ಯಾಂಕ್ ಭಾರೀ ನಷ್ಟದಿಂದ ಮುಚ್ಚಿಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು ಲೋಕೋಪಯೋಗಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಎಚ್.ಡಿ.ದೇವೇಗೌಡರು ಸರ್ಕಾರದಿಂದ 2 ಕೋಟಿ ರೂ. ಅರ್ಥಿಕ ನೆರವು ಕೊಡಿಸುವ ಮೂಲಕ ಬ್ಯಾಂಕಿಗೆ ಪುನಶ್ಚೇತನ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿದ ಪರಿಣಾಮ ಹಾಸನ ಜಿಲ್ಲೆಯ ರೈತರ 500 ಕೋಟಿ ರೂ. ಹೆಚ್ಚು ಸಾಲ ಮನ್ನಾ ಆಯಿತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಎಚ್‌ಡಿಸಿಸಿ ಬ್ಯಾಂಕಿನ 8 ರಿಂದ 10 ಕೋಟಿ ರೂ. ಸಾಲ ಮನ್ನಾ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಒಟ್ಟು 358 ಕೋಟಿ ರೂ. ಅಂತಹ ಸಾಲಮನ್ನಾದ ಬಾಕಿ ಉಳಿದಿದೆ ಎಂದರು.
ಮನ್ನಾ ಆಗದೆ ಉಳಿದಿರುವ ಸಾಲದ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಬ್ಯಾಂಕಿನ ಠೇವಣಿ ಮೊತ್ತ ಈಗ 1655 ಕೋಟಿ ರೂ. ಗಳಷ್ಟಿದ್ದು, ಬ್ಯಾಂಕಿನ 35 ಹೊಸ ಶಾಖೆಗಳನ್ನು ತೆರೆಯುವ ಅಗತ್ಯವಿದೆ. ಹಾಗೆಯೇ 150 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಸಿಬ್ಬಂದಿ ನೇಮಕಾತಿಯ ನಂತರ ಅಗತ್ಯವಿರುವ ಕಡೆ ಬ್ಯಾಂಕಿನ ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಂಡಿಗೌಡ್ರ ರಾಜಣ್ಣ, ನಿರ್ದೇಶಕರಾದ ಬಿದರಿಕೆರೆ ಜಯರಾಂ,ಹೊನ್ನವಳ್ಳಿ ಸತೀಶ್,ಡಾ.ಸೂರಜ್, ಎಂ.ಎ.ನಾಗರಾಜು, ಗೀರೀಶ್ ಚನ್ನವೀರಪ್ಪ, ಪುಟ್ಟಸ್ವಾಮಿಗೌಡ, ಜಗದೀಶ್, ಎಚ್.ಸಿ.ಚನ್ನೇಗೌಡ, ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು , ಸಹಕಾರ ಸಂಘಗಳ ಉಪ ನಿಬಂಧಕ ಕಿರಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net