ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಡಿ.ಟಿ. ಪ್ರಸನ್ನ ಆಯ್ಕೆ

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಡಿ.ಟಿ. ಪ್ರಸನ್ನ ಆಯ್ಕೆ
Published on

ಹಾಸನ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಅಧ್ಯಕ್ಷರಾಗಿ ಡಿ.ಟಿ. ಪ್ರಸನ್ನಕುಮಾರ್, ಉಪಾಧ್ಯಕ್ಷರಾಗಿ ಯೋಗೇಶ್ ಮೌರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ. ಸಂತೋಷ್, ಖಜಾಂಚಿಯಾಗಿ ಎಚ್.ಎನ್. ಪ್ರತಾಪ್, ಜಂಟಿ ಕಾರ್ಯದರ್ಶಿಯಾಗಿ ರೂಪಾ ಕರೀಗೌಡ ಅವರು ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾರ್ಲೆ ಮೊಗಣ್ಣಗೌಡ 323 ಮತ ಪಡೆದರೆ ಡಿ.ಪಿ. ಪ್ರಸನ್ನ 434 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾರ್ಯದರ್ಶಿಯ ಸ್ಥಾನಕ್ಕೆ ಎಚ್.ಆರ್. ಒಂಬೇಶ 307 ಮತಗಳು, ಎಸ್.ಬಿ. ಮಂಜುನಾಥ್ 67 ಮತಗಳು ಹಾಗೂ ಬಿ.ಎಂ. ಸಂತೋಷ್ 376 ಪಡೆದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಟಿ. ತಿಮ್ಮೇಗೌಡ 265 ಮತಗಳು, ಯತೀಶ್ 106 ಮತಗಳು, ಸುಗುಣಾ 74 ಮತಗಳು, ಶಿವರಾಮಚಂದ್ರ 10 ಮತಗಳು ಪಡೆದರೆ ಯೋಗೇಶ್ ಮೌರ್ಯ 280 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಖಜಾಂಚಿ ಸ್ಥಾನಕ್ಕೆ ಎ.ಜೆ. ರಘು 265 ಮತಗಳನ್ನು ಪಡೆದರೆ ಎಚ್.ಎನ್. ಪ್ರತಾಪ 496 ಮತಗಳನ್ನು ಪಡೆದು ಖಜಾಂಚಿಯಾಗಿ ಗೆಲುವಿನ ನಗೆ ಬೀರಿದರು.
ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷ ಡಿ.ಟಿ. ಪ್ರಸನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜೂನ್ 1 ರಂದು ನಡೆದ ವಕೀಲರ ಸಂಘದ ಅಧ್ಯಕ್ಷ ಸ್ಥಾನ ಹಾಗೂ ಪದಾಧಿಕಾರಿಗಳ ಚುನಾವಣೆಯ ಫಲಿತಾಂಶ ರಾತ್ರಿ ಪ್ರಕಟವಾಯಿತು. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ಹಿರಿಯ, ಕಿರಿಯ ವಕೀಲರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು 2014-15ನೇ ಸಾಲಿನಲ್ಲಿ ಈ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದೆ. ಈಗ ಅಧ್ಯಕ್ಷನಾಗಿದ್ದೇನೆ. ಮುಂದಿನ ದಿನಗಳಲ್ಲಿ ವಕೀಲರ ಸರ್ವ ಸದಸ್ಯರ ಸಭೆ ಕರೆದು ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿ ಅವುಗಳ ಕಾರ್ಯಗತಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಕೀಲರ ಸಂಘದಲ್ಲಿ 789 ಜನ ಮತದಾರರು ಇದ್ದು, ಎಲ್ಲರೂ ನನಗೆ ಹಾಗೂ ನಮ್ಮ ತಂಡಕ್ಕೆ ಆಶೀರ್ವಾದ ಮಾಡಿದ್ದಾರೆ. ನನ್ನ ಪ್ರತಿಸ್ಪರ್ಧಿಯಾಗಿ ಕಾರ್ಲೇ ಮೊಗಣ್ಣಗೌಡರು ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಮೊಗಣ್ಣಗೌಡರಿಗೂ ಕೂಡ ನಾನು ಆಬಾರಿ ಆಗಿದ್ದೇನೆ. ಮುಂದಿನ ದಿನಗಳಲ್ಲಿ ಅವರ ಸಹಕಾರವನ್ನು ಪಡೆದು ಉತ್ತಮ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್, ವಕೀಲ ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net