

ಕಲಬುರಗಿ: ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದಾದ ಬೆಳೆ ಹಾನಿಗೆ ಎಕರೆ ೨೦ ಸಾವಿರ ರೂ. ಪರಿಹಾರ, ಕ್ವಿಂಟಾಲ್ ತೊಗರಿಗೆ ೧೨ ಸಾವಿರ ರೂ. ನಿಗದಿಪಡಿಸಬೇಕು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಅ.೨೭ರಂದು ಬೆಳಗ್ಗೆ ೧೧ಕ್ಕೆ ಜಿಲ್ಲಾ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ನಾಗೇಂದ್ರ ಥಂಬೆ ತಿಳಿಸಿದರು.
ನಗರದ ಕಾಕಡೆ ಚೌಕ್ ಬಳಿಯ ಮುತ್ಯಾನ ಬಬಲಾದಿ ಮಠದ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾವೇಶದಲ್ಲಿ ಸಂಘದ ಅಧ್ಯಕ್ಷ ಬಡಗಲ್ ನಾಗೇಂದ್ರ, ಶಾಸಕ ಬಿ.ಆರ್. ಪಾಟೀಲ್, ಚಾಮರಸ ಮಾಲಿಮಾಟೀಲ್, ದರ್ಶನ ಪುಟ್ಟಣ್ಣಯ್ಯ, ಟಿ.ನೊಲೇನೂರು ಶಂಕ್ರಪ್ಪ, ರವಿಕುಮಾರ ಪೂಣಚ್ಚ, ಜಿಎಂ ವೀರಸಂಗಯ್ಯ ಸೇರಿ ರಾಜ್ಯ ಮಟ್ಟದ ರೈತ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತರ ಸಂಪೂರ್ಣ ಸಾಲ ಮನ್ನಾ, ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್, ಉದ್ಯೋಗ ಖಾತ್ರಿ ಅಡಿ ೨೦೦ ದಿನ ಕೆಲಸ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹೀಗೆ ವಿವಿಧ ಬೇಡಿಕೆ ಮಂಡನೆ ಜತೆಗೆ ವಿವಿಧ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.
ಪ್ರಮುಖರಾದ ಈರಣ್ಣ ಬಿರಾದಾರ, ರಮೇಶ ರಾಗಿ, ಉಮಾಪತಿ ಪಾಟೀಲ್ ಇತರರಿದ್ದರು.