ಜಿಲ್ಲಾ ಮಟ್ಟದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆ

gandiji
Published on

ಚಿತ್ರದುರ್ಗ: ಮಹಾತ್ಮಾಗಾಂಧೀಜಿ ಅವರ 156 ನೇ ಜಯಂತಿ ಅಂಗವಾಗಿ ವಾರ್ತಾ ಇಲಾಖೆಯಿಂದ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಗಾಂಧೀಜಿ ಅವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ ಇತ್ಯಾದಿ ವಿಚಾರಗಳ ಕುರಿತು ಸೆ.8 ರಂದು ಜಿಲ್ಲಾದ್ಯಂತ ಏಕಕಾಲಕ್ಕೆ ಆಯಾ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.

ಪ್ರತಿ ವಿಭಾಗಕ್ಕೂ ಪ್ರತ್ಯೇಕವಾಗಿ ಪ್ರಥಮ-3000 ರೂ., ದ್ವಿತೀಯ-2000 ರೂ. ಹಾಗೂ ತೃತೀಯ-1000 ರೂ.ನಗದು ಬಹುಮಾನ ಇರುತ್ತದೆ. ಪ್ರಥಮ ಬಹುಮಾನ ಪಡೆದ ಪ್ರಬಂಧಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ-31000 ರೂ., ದ್ವಿತೀಯ-21000 ರೂ. ಹಾಗೂ ತೃತೀಯ 11,000 ರೂ. ಬಹುಮಾನವಿರುತ್ತದೆ.

ಪ್ರತಿ ವಿಭಾಗಕ್ಕೂ ಸ್ಪರ್ಧೆಗೆ ನಿಗದಿ ಪಡಿಸಿರುವ 3 ವಿಷಯಗಳ ಪೈಕಿ ಒಂದು ವಿಷಯದ ಕುರಿತು ವಿದ್ಯಾರ್ಥಿಗಳು ನಿಗದಿ ಪಡಿಸಿದ ಪದಗಳ ಮಿತಿಯೊಳಗೆ ಪ್ರಬಂಧ ಬರೆಯಬೇಕು ಎಂದರು.

ಪ್ರೌಢಶಾಲಾ ವಿಭಾಗದ ವಿಷಯ- ಸ್ವಚ್ಛತೆ ಪಾಠ, ಗಾಂಧೀಜಿ ಸಂದೇಶ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿ ಪಾತ್ರ, ಗಾಂಧೀಜಿ ಸ್ವಾತಂತ್ರ್ಯದ ಕನಸು- ನನ್ನ ಕಲ್ಪನೆ, ಪದಗಳ ಮಿತಿ 700 ರಿಂದ 800, ಪದವಿ ಪೂರ್ವ ಕಾಲೇಜು ವಿಭಾಗದ ವಿಷಯ- ಅಸ್ಪಶ್ಯತೆ ನಿವಾರಣೆಯಲ್ಲಿ ಗಾಂಧೀಜಿ ಹೋರಾಟ, ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ, ಬದಲಾವಣೆ ನನ್ನಿಂದಲೇ ಆರಂಭ- ಗಾಂಧೀಜಿ ಪಾಠ 900 ರಿಂದ 1000 ಪದಗಳು.

ಪದವಿ-ಸ್ನಾತಕೋತ್ತರ ಪದವಿ ವಿಭಾಗದ ವಿಷಯ- ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ, ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್- ತತ್ವಗಳ ಹೋಲಿಕೆ, ಮೌಲ್ಯಾಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ- ಯುವಕರಿಗೆ ಗಾಂಧೀಜಿ ಅವರ ಪಾಠ 1400 ರಿಂದ 1500 ಪದಗಳು.

ಪ್ರಬಂಧ ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧಾ ಸ್ಥಳದಲ್ಲಿಯೇ ಶುದ್ಧ ಕೈ ಬರಹದಲ್ಲಿ ಪ್ರಬಂಧ ಬರೆಯಬೇಕು. ಆಕರವಾಗಿ ಬಳಸಿದ ಪರಾಮರ್ಶನ/ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು. ಸ್ಪರ್ಧೆ ಸ್ಥಳದಲ್ಲಿ ಪರಾಮರ್ಶನ/ಆಧಾರ ಗ್ರಂಥಗಳು/ಮೊಬೈಲ್ ಬಳಕೆಗೆ ಅವಕಾಶ ಇರುವುದಿಲ್ಲ.

ವಿದ್ಯಾರ್ಥಿ ಹೆಸರು, ತರಗತಿ, ಕಾಲೇಜು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ವಿವರಗಳನ್ನು ಪ್ರಬಂಧದಲ್ಲಿ ನಮೂದಿಸಿರಬೇಕು. ಪ್ರಬಂಧ ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಸಿಇಒ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net