ಜಿಲ್ಲಾ ಮಟ್ಟದ ಸಂವಿಧಾನ ಓದು 15ಕ್ಕೆ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ

11
Published on

ಮೈಸೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು 3ರಿಂದ 5 ಸಾವಿರ ಸಾರ್ವಜನಿಕರು, ವಿದ್ಯಾರ್ಥಿಗಳು ಏಕಕಾಲದಲ್ಲಿ ಸಂವಿಧಾನ ಪೀಠಿಕೆ ಓದಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಸೂರು ವಿಶ್ವವಿದ್ಯಾಲಯದ ಕ್ರಾರ್ಫಡ್ ಭವನದ ಎದುರು ಇರುವ ಓವಲ್ ಮೈದಾನದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಮಟ್ಟದ ಸಂವಿಧಾನ ಓದು’ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಸುಮಾರು 5 ಸಾವಿರ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಏಕಕಾಲದಲ್ಲಿ ಸಂವಿಧಾನ ಪೀಠಿಕೆ ಓದಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿರುವ ಕಚೇರಿಗಳು, ವಿದ್ಯಾಸಂಸ್ಥೆಗಳು ತಮ್ಮ ಕಚೇರಿ ಹಾಗೂ ವಿದ್ಯಾಸಂಸ್ಥೆಗಳಲ್ಲಿ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಬೇಕು ಎಂದು ನಿರ್ದೇಶನ ನೀಡಿದರು.
ರಾಜ್ಯಮಟ್ಟದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಮ್ಮುಖದಲ್ಲಿ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ವಿದ್ಯಾಸಂಸ್ಥೆಗಳು, ಇಲಾಖೆಗಳು ಆನ್‌ಲೈನ್ ಮೂಲಕ ಪಾಲ್ಗೊಳ್ಳುವರು. ಹಾಗಾಗಿ, ಅದೇ ಸಂದರ್ಭಕ್ಕೆ ಜಿಲ್ಲೆಯಲ್ಲೂ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಂವಿಧಾನದ ಪೀಠಿಕೆಯನ್ನು ಓದುವುದರೊಂದಿಗೆ ಎಲ್ಲರೂ ಸಂವಿಧಾನದ ಪೀಠಿಕೆಗೆ ಬದ್ಧರಾಗಿರಬೇಕು. ಸಾಂವಿಧಾನಿಕ ತತ್ವಗಳನ್ನು ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳಬೇಕು. ಅಂದು ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಸಂವಿಧಾನ ಪೀಠಿಕೆ ಓದಬೇಕು. ಈ ಮೂಲಕ ಸಂವಿಧಾನ ಪೀಠಿಕೆಯ ಮಹತ್ವ ಹಾಗೂ ಸಂವಿಧಾನದ ಮೌಲ್ಯ ಮತ್ತು ತತ್ವಗಳನ್ನು ಜನರಿಗೆ ತಿಳಿಸಬೇಕು ಎಂದರು.
ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯಿತಿ ಅಧಿಕಾರಿಗಳು ಸೇರಿ ತಾಲೂಕು ಕ್ರೀಡಾಂಗಣಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಬೇಕು. ಶಾಲಾ ಶಿಕ್ಷಣ ಇಲಾಖೆ, ಕಾಲೇಜು ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂವಿಧಾನ ಪೀಠಿಕೆ ಓದುವಲ್ಲಿ ನೋಂದಣಿ ಮಾಡಿಸುವುದಕ್ಕೆ ಗುರಿ ನಿಗದಿಪಡಿಸಿದ್ದು, ಇದನ್ನು ಸೂಕ್ತವಾಗಿ ಪಾಲಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಬರುವ ದಲಿತ ಸಂಘರ್ಷ ಸಮಿತಿಯ ಮುಖಂಡರು, ಪರಿಶಿಷ್ಟ ಪಂಗಡದ ಮುಖಂಡರು, ಹಿಂದುಳಿದ ವರ್ಗಗಳ ಮುಖಂಡರುಗಳು ಹಾಗೂ ಅಲ್ಪಸಂಖ್ಯಾತರ ಸಮಿತಿಯ ಮುಖಂಡರು ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ನಗರಪಾಲಿಕೆ ಆಯುಕ್ತ ಅಶಾದ್ ಉರ್ ರೆಹ್ಮಾನ್ ಶರೀಫ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net