ಚಾಮರಾಜನಗರ: ನಗರದಲ್ಲಿ ಅ.16 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಯುವ ಕಲಾವಿದರ ಬಳಗದ ಸದಸ್ಯ ಶಿವಶಂಕರ್ ಚಟ್ಟು ಆಗ್ರಹಿಸಿದರು.
ಈ ಮೊದಲು ಯುವಜನ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿ ಯುಜನೋತ್ಸವ ಹಾಗೂ ನೆಹರೂ ಯುವಕೇಂದ್ರದ ವತಿಯಿಂದ ಯುವಜನ ಮೇಳ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಆಯೋಜನೆ ಮಾಡಲಾಗುತ್ತಿತ್ತು. ಈ ಎರಡು ಕಾರ್ಯಕ್ರಮಗಳಿಗೂ ಬೇರೆ ಬೇರೆ ಮಾನದಂಡಗಳನ್ನು ಒಳಗೊಂಡಿವೆ. ಆದರೆ ಈ ಎರಡು ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ನಡೆಸಲಾಗುತ್ತಿದೆ. ಇದರಿಂದ ಕಲಾವಿದರು ವಿವಿಧ ಸ್ಪರ್ಧೆಗಳಿಂದ ವಂಚಿತರಾಗಲಿದ್ದಾರೆ. ಈ ಕಾರ್ಯಕ್ರಮವನ್ನು ನಿಲ್ಲಿಸದಿದ್ದರೇ ಯುವ ಕಲಾವಿದರ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಬಂಧಿಸಬೇಕು. ಅವರನ್ನು ಗಡಿಪಾರು ಮಾಡಬೇಕು ಎಂದು ಈ ವೇಳೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಳಗದ ರಮೇಶ್ ದಡದಹಳ್ಳಿ, ಕೃಷ್ಣಮೂರ್ತಿ ಚಂಗಚಹಳ್ಳಿ, ಮಹೇಶ್ ಕೋಲು, ಮಂಜು ಶ್ರೀರಾಮ್, ಆದರ್ಶ ಯರಗಂಬಳ್ಳಿ, ಸಿದ್ದರಾಜು, ಸ್ವಾಮಿ ಹೊಂಗನೂರು ಹಾಜರಿದ್ದರು.