

ಹುಬ್ಬಳ್ಳಿ: ರಾಜ್ಯ ವಿಜ್ಞಾನ ಪರಿಷತ್ತು ಧಾರವಾಡ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಹೊಸೂರ ಅಗಸ್ಱ ವಿಜ್ಞಾನ ಕೇಂದ್ರದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವ ಪರಿಸರ ವ್ಯವಸ್ಥೆ ಎಂಬ ವಿಷಯದಡಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ 10 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.
ಗ್ರಾಮೀಣ ಕಿರಿಯ ವಿಭಾಗದಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಪವಿತ್ರಾ ಮುದೆಪ್ಪನವರ ಹಾಗೂ ಶಿರೂರ ಪ್ರೌಢ ಶಾಲೆಯ ಸ್ನೇಹಾ ಪಟದಾರ, ಗ್ರಾಮೀಣ ಹಿರಿಯ ವಿಭಾಗದಲ್ಲಿ ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯ ಜ್ಯೋತಿ ಅಂಗಡಿ, ಕುಸುಗಲ್ಲ ಪ್ರೌಢಶಾಲೆಯ ಕಾವ್ಯ ಬರದ್ವಾಡ, ಶಿರೂರ ಪ್ರೌಢಶಾಲೆಯ ಲಕ್ಷ್ಮೀ ಭರಮಗೌಡ್ರ, ಶಹರ ಕಿರಿಯ ವಿಭಾಗದಲ್ಲಿ ಗೋಕುಲ ಪ್ರೌಢಶಾಲೆಯ ವೀರೇಶಗೌಡ ಪಾಟೀಲ ಹಾಗೂ ಆನಂದನಗರ ಶಾಲೆಯ ಶ್ರೇಯಾ ಅಸಬಿ, ಶಹರ ಹಿರಿಯ ವಿಭಾಗದಲ್ಲಿ ಗೋಕುಲ ಪ್ರೌಢಶಾಲೆಯ ವಿದ್ಯಾ ಮುದ್ದಣ್ಣವರ, ಧಾರವಾಡ ಬಾಸೆಲ್ ಮಿಶನ್ ಪ್ರೌಢಶಾಲೆಯ ಋಗ್ವೇದ ಅರಳೀಕಟ್ಟಿ ಹಾಗೂ ಹುಬ್ಬಳ್ಳಿ ಎಸ್ಬಿಐ ಪ್ರೌಢಶಾಲೆಯ ಸುಮಂತ ಬಣವಿ ಅವರ ಸಂಶೋಧನಾ ಪ್ರಬಂಧಗಳು ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿವೆ.
ಸಮಾವೇಶ ಸಮಾರೋಪದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಮಕ್ಕಳು ಗೂಗಲ್ ಸರ್ಚ್ ಮೂಲಕ ಹಲವಾರು ಮಾಹಿತಿ ಸಂಗ್ರಹಿಸಿಕೊಳ್ಳುತ್ತಾರೆ. ಆದರೆ, ಅದೆಲ್ಲವೂ ಸತ್ಯವಲ್ಲ. ಅದರ ಸತ್ಯಾಸತ್ಯತೆ ಅರಿಯಲು ಮಕ್ಕಳು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಿ ಮಾತನಾಡಿದ ಜನವಿಜ್ಞಾನ ಚಳವಳಿ ನಾಯಕ ಬಿ.ಎಸ್. ಸೊಪ್ಪಿನ, ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಾರೆ. ಆದರೆ, ಪ್ರಯೋಗಾಲಯದ ಫಲಿತಗಳು ಜನರಿಗೆ ತಲುಪಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕ ಸಂಜಯ ಮಾಳಿ ಮಾತನಾಡಿದರು.
ವಿಜ್ಞಾನ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ರಾಮಾಪುರ ಅಧ್ಯಕ್ಷತೆ ವಹಿಸಿದ್ದರು. ನಿರ್ಣಾಯಕರಾಗಿ ಸಂಜೀವಕುಮಾರ ಭೂಶೆಟ್ಟಿ, ಮೃತ್ಯುಂಜಯ ಜಡೀಮಠ ಅವರು ನಿರ್ವಹಿಸಿದರು. ಶೈಕ್ಷಣಿಕ ಸಮನ್ವಯಕಾರ ಸಿದ್ದಪ್ಪ ಭಾವಿಕಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶಿವಾನಂದ ನಾಗೂರ ನಿರೂಪಿಸಿದರು. ಜಯಶ್ರೀ ಹಕ್ಕಳಿ ವಂದಿಸಿದರು.