ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಉತ್ತಮ ಸಹಕಾರ

Published on

ಚಾಮರಾಜನಗರ: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಚಾಮರಾಜನಗರ ಸ್ತಬ್ಧಚಿತ್ರ ಉತ್ತಮವಾಗಿ ಮೂಡಿಬರಲು ಜಿಲ್ಲಾ ಮಟ್ಟದ ಅಧಿಕಾರಿಗಳು ಕಲಾವಿದರಿಗೆ ಉತ್ತಮ ಸಹಕಾರವನ್ನು ನೀಡಿದ್ದಾರೆ ಎಂದು ಯುವ ಉದ್ಯಮಿ ಶ್ರೀನಿಧಿ ಕುದರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿಯಲ್ಲಿ ಶುಕ್ರವಾರ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮೆರವಣಿಗೆಯಲ್ಲಿ ಚಾಮರಾಜನಗರ ಸ್ತಬ್ಧಚಿತ್ರವು ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಜಿಲ್ಲೆಯ ಹೆಸರಾಂತ ಚಿತ್ರಕಲಾವಿದ ಹೊಸೂರು ಮಧುಸೂದನ್ ಅವರು ಸ್ತಬ್ಧಚಿತ್ರಕ್ಕೆ ಜೀವವನ್ನು ತುಂಬಿದ್ದರು. ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್ ಅವರು ಕಲಾವಿದರಿಗೆ ಉತ್ತಮ ಸಹಕಾರವನ್ನು ನೀಡಿದ್ದರು. ಈ ಕಾರಣಕ್ಕೆ ಮೈಸೂರು ವಿಭಾಗದಲ್ಲಿ ಸ್ತಬ್ಧಚಿತ್ರವು ಪ್ರಥಮ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು ಎಂದರು.

ಜಿಲ್ಲೆ ಶೇ.50 ಕ್ಕಿಂತಲೂ ಹೆಚ್ಚು ಅರಣ್ಯಪ್ರದೇಶವನ್ನು ಒಳಗೊಂಡಿದ್ದು, ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಡೆಯುತ್ತಲೇ ಇದೆ. ಇತ್ತೀಚೆಗೆ ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಹುಲಿಗಳಿಗೆ ವಿಷವಿಟ್ಟು ಕೊಂದದ್ದು ದುರಂತದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಸ್ತಬ್ಧಚಿತ್ರ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಪಿ.ಬಾಲಸುಬ್ರಮಣ್ಯ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಹೂಸೂರು ಶಿವಣ್ಣ, ಜಿಲ್ಲಾ ಪಂಚಾಯಿತಿ ಯೋಜನೆ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ವಿ.ದೀಪಾ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರ ಪಾಟೀಲ್, ಬಿಸಿಎಂ ಇಲಾಖೆ ಅಧಿಕಾರಿ ವಿಶ್ವನಾಥ್, ವೇದಿಕೆ ಉಪಾಧ್ಯಕ್ಷೆ ವಸಂತಮ್ಮ, ಜೋಸೆಫ್, ಎ.ಎನ್.ಪದ್ಮಾಕ್ಷಿ, ಎಲ್.ಸುರೇಶ್, ಶಂಕರ್ ಸಿ.ಅಂಕನಶೆಟ್ಟಿಪುರ, ಪಣ್ಯದಹುಂಡಿ ರಾಜು, ಶ್ರೀನಿವಾಸಗೌಡ, ಲಿಂಗರಾಜು ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net