

ತಿ.ನರಸೀಪುರ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಬಿಜೆಪಿ ಸಮಿತಿಯನ್ನು ತಕ್ಷಣವೇ ಮರು ರಚನೆ ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ಬಲಿಷ್ಠವಾಗಿರಬೇಕು. ಆ ನಿಟ್ಟಿನಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಾಂತರದಲ್ಲಿ ಪಕ್ಷ ಸೋಲು ಅನುಭವಿಸಿದೆ. ನಗರ ಪ್ರದೇಶದಲ್ಲಿ ಶ್ರೀವತ್ಸ ಮಾತ್ರ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದಾರೆ. ಅದನ್ನು ಹೊರತುಪಡಿಸಿದರೆ ನಾವು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಸೋಲು ಅನುಭವಿಸಿದ್ದೇವೆ. ಹೀಗಾಗಿ ಕೂಡಲೇ ಜಿಲ್ಲಾ ಸಮಿತಿ ಮರು ರಚನೆ ಮಾಡಿ, ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರಾಗಿರುವುದರಿಂದ ಅವರನ್ನು ಹಿಡಿದಿಡುವ ಕಾರ್ಯತಂತ್ರ ಜಿಲ್ಲಾ ಸಮಿತಿ ಮಾಡಬೇಕಿದೆ. ಜಿಲ್ಲೆಯ ಲೋಕಸಭಾ ಕ್ಷೇತ್ರಗಳಲ್ಲಿ ಅವರಿಗೆ ಹೆಚ್ಚಿನ ಕೆಲಸ ಕೊಟ್ಟರೆ ಬೇರೆ ಕ್ಷೇತ್ರದ ಕಡೆ ಹೋಗಲಾಗುವುದಿಲ್ಲ. ಹಾಗಾಗಿ ಜಿಲ್ಲಾ ಸಮಿತಿ ಬಲಿಷ್ಠವಾಗಬೇಕಿದ್ದು, ಅಗತ್ಯವಿದ್ದರೆ ಜಿಲ್ಲೆಯಲ್ಲಿ ನಾಯಕತ್ವ ಬದಲಾಗಬೇಕಿದೆ ಎಂದರು.
ಪಕ್ಷದಲ್ಲಿ 10 ವರ್ಷಗಳ ಸೇವೆ ಸಲ್ಲಿಸಿದವರಿಗೆ ಮಾತ್ರ ಲೋಕಸಭಾ ಚುನಾವಣೆ ಟಿಕೆಟ್ ನೀಡಿ. ನಾನು ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಎಂಎಲ್‌ಸಿ, ರಾಜ್ಯ ಕಾರ್ಯದರ್ಶಿ, ನಿಗಮದಲ್ಲಿ ಕೆಲಸ ಮಾಡಿದ್ದೇನೆ. ನನಗಿಂತಲೂ ಎತ್ತರದ ಸ್ಥಾನದಲ್ಲಿದ್ದರೆ ಅಂತಹವರಿಗೆ ಟಿಕೆಟ್ ನೀಡಲಿ ಎಂದರು.
ಬಹು ದೊಡ್ಡ ನಾಯಕ, ಎಂಎಲ್‌ಎ, ಎಂಪಿ, ಎಂಎಲ್ಸಿ ಆಗಿದ್ದರೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ಕೊಡಬಹುದು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸದಸ್ಯನೇ ಅಲ್ಲದ ವ್ಯಕ್ತಿಗೆ ಟಿಕೆಟ್ ಕೊಡಲು ಮೈಸೂರು ಜಿಲ್ಲಾ ಸಮಿತಿ ಶಿಫಾರಸು ಮಾಡಿತ್ತು. ಅವರನ್ನು ಬಲವಂತವಾಗಿ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಡಿಸಿ, ಟಿಕೆಟ್ ನೀಡಲಾಯಿತು. ಅನ್ಯಾಯವಾಗಿ ಅವರ ಕೆಲಸವೂ ಹೋಯ್ತು, ಚುನಾವಣೆಯಲ್ಲಿ ಆತ ಮೂರನೇ ಸ್ಥಾನಕ್ಕೆ ಹೋದ. ಪಕ್ಷದವರನ್ನು ಬಿಟ್ಟು ಅಂತಹವರಿಗೆ ಟಿಕೆಟ್ ಕೊಡುವ ಅವಶ್ಯಕತೆ ಏನಿತ್ತು? ಮತ್ತೆ ಇಂತಹ ತಪ್ಪು ಮರುಕಳಿಸಬಾರದು. ಹೈಕಮಾಂಡ್‌ಗೆ ಇಲ್ಲಿನ ಪರಿಸ್ಥಿತಿ ತಿಳಿದಿರುವುದಿಲ್ಲ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೂಡಲೇ ಜಿಲ್ಲಾ ಸಮಿತಿ ಮರು ರಚನೆ ಮಾಡಿ, ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಲು ರಾಜ್ಯ ಸಮಿತಿ ಮುಂದಾಗಬೇಕು ಎಂದು ರಮೇಶ್ ಒತ್ತಾಯಿಸಿದರು.