ಜಿಲ್ಲಾ ಬಿಜೆಪಿ ಸಕ್ರಿಯ ಅಭಿಯಾನಕ್ಕೆ ಚಾಲನೆ

ಜಿಲ್ಲಾ ಬಿಜೆಪಿ ಸಕ್ರಿಯ ಅಭಿಯಾನಕ್ಕೆ ಚಾಲನೆ
Published on

 ಹಾಸನ: ನಗರದ ಆರ್.ಸಿ.ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಬಿಜೆಪಿ ಸಕ್ರಿಯ ಅಭಿಯಾನ ಮತ್ತು ಸಂಘಟನಾ ಪರ್ವಗಳ ಕುರಿತು ಅವಲೋಕನ ಸಭೆ ಮಾಜಿ ಸಚಿವ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್ ಅವರು, ಪಕ್ಷದ ಸಂಘಟನಾ ಪರ್ವದ ಹಿನ್ನಲೆ ನಾನು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡುತ್ತಿದ್ದೇನೆ. ಸದಸ್ವತ್ವ ಅಭಿಯಾನ ಕರ್ನಾಟಕದಲ್ಲಿ ಪ್ರಾರಂಭವಾಗಿ ಒಂದು ತಿಂಗಳ ನಂತರ ಸುಮಾರು 75 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಕರ್ನಾಟಕದಲ್ಲಿ ನೋಂದಣಿ ಮಾಡುವ ಮೂಲಕ ಅಂತಿಮ ಹಂತದ ಸದಸ್ವತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ನ.20 ರಿಂದ ಈ ಪ್ರಕ್ರಿಯೆಗೆ ಚಾಲನೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದ 56 ಸಾವಿರ ಬೂತುಗಳನ್ನು ಪುನರ್ ರಚನೆ ಮಾಡಲಾಗುವುದು. ಬೂತ್ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರ ಪುನರ್ ರಚನೆಯೂ ನಡೆಯಲಿದೆ. ಅದಕ್ಕಾಗಿ ಡಿಸೆಂಬರ್ 30ರ ಒಳಗೆ ಸದಸ್ಯತ್ವ ಅಭಿಯಾನ ಮುಗಿಯಬೇಕೆಂದು ಅಂದುಕೊಂಡಿದ್ದೇವೆ. ಈ ಹಿನ್ನಲೆ ಪ್ರವಾಸ ನಡೆಯುತ್ತಿದೆ. ಹೆಚ್ಚು ಯುವಕರನ್ನು ಬೂತ್ ಸಮಿತಿಗೆ ತೊಡಗಿಸುವ ತಯಾರಿಯನ್ನು ರಾಜ್ಯದ ಎಲ್ಲಾ ಕಡೆಗಳಲ್ಲೂ ಮಾಡುತ್ತಿರುವುದಾಗಿ ಹೇಳಿದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಬಿಜೆಪಿ ಮುಖಂಡರಿಂದ ಮಾಹಿತಿ ಸಂಗ್ರಹಿಸಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸುವಂತೆ ಸೂಚನೆ ನೀಡಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಮುಖಂಡರಾದ ರೇಣುಕುಮಾರ್, ಪ್ರಸನ್ನಕುಮಾರ್, ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net