ಜಿಲ್ಲಾ ಪೊಲೀಸ್ ಶ್ವಾನದಳದ ಸ್ಫೋಟಕ ಪತ್ತೆಗೆ ‘ಪ್ರಜ್ಞಾನ್’ ನೇಮಕ

CTD 30 PRAGANAN-02--0003
Published on

ಚಿತ್ರದುರ್ಗ: ಚಂದ್ರಯಾನ-3 ರ ಯಶಸ್ವಿ ಕಾರ‌್ಯಾಚರಣೆಯಲ್ಲಿ ಕೇಳಿಬಂದಂಥ ರೋವರ್ ‘ಪ್ರಜ್ಞಾನ್’ ಹೆಸರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಹೊಸ ಶ್ವಾನಕ್ಕೆ ಇಡಲಾಗಿದೆ.
ಈ ದಳದಲ್ಲಿ ಸ್ಫೋಟಕ ಪತ್ತೆ ಕರ್ತವ್ಯದಲ್ಲಿದ್ದ‘ಚಿಟ್ಟಿ’(10) ಕಳೆದ ಜನವರಿ 10 ರಂದು ನಿಧನ ಹೊಂದಿತ್ತು. ತೆರವಾದ ಸ್ಥಾನವನ್ನು ‘ಪ್ರಜ್ಞಾನ್’ ತುಂಬುತ್ತಿದ್ದು, ಎಸ್‌ಪಿ ಧರ್ಮೇಂದರ್‌ಕುಮಾರ್ ಈ ಹೆಸರನ್ನು ಸೂಚಿಸಿದ್ದಾರೆ. ಏಳೆಂಟು ತಿಂಗಳಿನ ‘ಪ್ರಜ್ಞಾನ್’ ಈಗ ಬೆಂಗಳೂರು ಆಡುಗೋಡಿಯಲ್ಲಿ ತರಬೇತಿಯಲ್ಲಿದೆ. ತರಬೇತಿ ಬಳಿಕ ಕರ್ತವ್ಯಕ್ಕೆ ಸೇರ್ಪಡೆಯಾಗಲಿದೆ.
ಜಿಲ್ಲಾ ಶ್ವಾನದಳದಲ್ಲಿ ಆರು ಶ್ವಾನಗಳಿವೆ. ಈ ಪೈಕಿ ಮೂರನ್ನು ಅಪರಾಧ ಹಾಗೂ ಇನ್ನುಳಿದ ಮೂರನ್ನು ಸ್ಫೋಟಕ ಪತ್ತೆ ಕರ್ತವ್ಯಕ್ಕೆ ನಿ ಯೋಜಿಸಲಾಗಿದೆ. ದಳದ ಅತ್ಯಂತ ಹಿರಿಯ ಶ್ವಾನ, ಅಪರಾಧ ಪತ್ತೆಯಲ್ಲಿರುವ ‘ಅಗಸ್ತ್ಯ’ ನಿವೃತ್ತಿ ಸಮೀಪದಲ್ಲಿದೆ.
2016 ರಲ್ಲಿ ನಡೆದಿದ್ದ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಅಗಸ್ತ್ಯ ರಾಜ್ಯಕ್ಕೆ ಪ್ರಥಮ ಹಾಗೂ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರಮವಾಗಿ ಚಿನ್ನದ ಮತ್ತು ಬೆಳ್ಳಿ ಪದಕಕ್ಕೆ ಭಾಜನವಾಗಿತ್ತು. ‘ಲಿಯೋ’ ಹಾಗೂ ‘ದ್ರೋಣ’ ಕೂಡ ಅಪರಾಧ ಪ್ರಕರಣಗಳ ಪತ್ತೆಯಲ್ಲಿವೆ. ಸ್ಫೋಟಕ ವಸ್ತುಗಳ ಪತ್ತೆ ಕಾರ‌್ಯದಲ್ಲಿ ‘ವಿಕ್ಕಿ’ ಮತ್ತು ‘ರಾಖಿ’ ಕರ್ತವ್ಯದಲ್ಲಿವೆ.

ಮಾದಕ ವಸ್ತುಗಳ ಪತ್ತೆಗೆ ಪ್ರತ್ಯೇಕ ಶ್ವಾನ
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಪತ್ತೆಗೆ ವಿಶೇಷ ತರಬೇತಿ ಪಡೆದ ಶ್ವಾನವಿಲ್ಲ. ಸ್ಫೋಟಕ ಪತ್ತೆ ಶ್ವಾನಗಳನ್ನೇ ಇದಕ್ಕೆ ನಿಯೋಜಿಸಲಾಗುತ್ತಿದೆ. ಕಾರಾಗೃಹ ಮತ್ತ್ತಿತರ ಸ್ಥಳಗಳ ತಪಾಸಣೆ ವೇಳೆ ಪ್ರತ್ಯೇಕವಾಗಿ ಮಾದಕ ವಸ್ತುಗಳ ಪತ್ತೆಯಲ್ಲಿ ತರಬೇತಿ ಪಡೆದ ಶ್ವಾನವಿದ್ದರೆ ಹೆಚ್ಚು ಉಪಯುಕ್ತವೆಂಬ ಅಭಿಪ್ರಾಯವಿದೆ.
ತಾಪಮಾನದಿಂದ ರಕ್ಷಣೆಗೆ ಪ್ರಯತ್ನ
ಹೆಚ್ಚಿರುವ ಬೇಸಿಗೆ ತಾಪಮಾನದಿಂದ ರಕ್ಷಣೆಗೆ ಇಲ್ಲಿಯ ಶ್ವಾನಗಳಿಗೆ 24/7 ಫ್ಯಾನ್‌ಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಪೂರೈಕೆ ಸ್ಥಗಿತವಾದರೂ ತೊಂದರೆಯಾಗದಂತೆ ಜಿಲ್ಲಾ ಶ್ವಾನದಳ ಕಟ್ಟಡದಲ್ಲಿ ಯುಪಿಎಸ್ ಅಳವಡಿಸಲಾಗಿದೆ. 2-3 ತಾಸುಗಳಿಗೊಮ್ಮೆ ತಣ್ಣೀರಿಂದ ಕೆನಾಲ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಅವುಗಳಿರುವ ಸ್ಥಳವನ್ನು ತಂಪಾಗಿಸುವ ಪ್ರಯತ್ನ ನಡೆದಿದೆ.
ಆಹಾರದಲ್ಲೂ ಬದಲಾವಣೆ
ಶ್ವಾನಗಳಿಗೆ ಕೊಡುವಂಥ ಮೊಟ್ಟೆ, ಗಂಜಿ ಇತ್ಯಾದಿ ನಿತ್ಯದ ಆಹಾರದೊಂದಿಗೆ ರಾಗಿ ಅಂಬಲಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. ವಾ ರದಲ್ಲಿ 2 ದಿನ ಹಾಲು ಹಾಗೂ ನಾಲ್ಕು ದಿನಗಳ ಕಾಲ ಮಜ್ಜಿಗೆಯನ್ನು ಕೊಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net