

ಹಾಸನ : ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಡಿ ಜಿಲ್ಲಾ ಪರಿಷತ್ ರಚನೆಯಾದ ನಂತರ ಜಿಲ್ಲೆಯಿಂದ ಪ್ರಥಮ ಅಧ್ಯಕ್ಷರಾಗಿದ್ದ ಹಿರಿಯ ಜೆಡಿಎಸ್ ಮುಖಂಡ ಎಸ್.ಕೆ.ಬಾಲಕೃಷ್ಣ ಮೂರ್ತಿ(64) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಭಾನುವಾರ ಸಂಜೆ ಮೃತಪಟ್ಟಿದ್ದ ಅವರ ಅಂತ್ಯಕ್ರಿಯೆ ಸೋಮವಾರ ಮೃತರ ಸ್ವಗ್ರಾಮ ಸಾಲಗಾಮೆಯಲ್ಲಿ ನೆರವೇರಿತು. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಪಡೆಯಲು ಮೀಸಲಾತಿ ಜಾರಿಯಾಗುವ ಮುನ್ನವೇ ದಲಿತ ಮುಖಂಡರೊಬ್ಬರು ಜಿಲ್ಲಾ ಪರಿಷತ್ ಅಧ್ಯಕ್ಷರಾಗುವ ಮೂಲಕ ಬಾಲಕೃಷ್ಣ ಅವರು ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಅಲ್ಲಿಂದ ಇಲ್ಲಿಯವರೆಗೂ ಜೆಡಿಎಸ ಪಕ್ಷ ಹಾಗೂ ಮುಖಂಡರಿಗೆ ನಿಷ್ಠರಾಗಿದ್ದರು. ಅಷ್ಟೇ ಅಲ್ಲ ಆರಂಭದಿಂದ ಕೊನೆಯವರೆಗೂ ಪ್ರಾಮಾಣಿಕತೆ, ಸರಳಯಿಂದಲೇ ಬದುಕಿದ್ದರು ಎಂದರೆ ತಪ್ಪಾಗಲಾರದು.
ಹೆಚ್‌ಡಿಡಿ ಸೇರಿ ಹಲವರ ಸಂತಾಪ:
ಬಾಲಕೃಷ್ಣ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಾದಿಯಾಗಿ ಅನೇಕರು ಕಂಬನಿ ಮಿಡಿದಿದ್ದಾರೆ. ಜಿಲ್ಲಾ ಪರಿಷತ್ ಅಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದರೂ, ಪರಿಶಿಷ್ಟ ಸಮಾಜದ ಬಾಲಕೃಷ್ಣ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೆ. ಆ ಹುದ್ದೆಗಾಗಲೀ ಅಥವಾ ಪಕ್ಷಕ್ಕಾಗಿ ಕಿಂಚಿತ್ತೂ ಲೋಪವಾಗದ ರೀತಿಯಲ್ಲಿ ಬಾಲಕೃಷ್ಣ ನಡೆದುಕೊಂಡರು. ಪಕ್ಷ ಸಂಘಟನೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ದೇವೇಗೌಡರು ಸ್ಮರಿಸಿದ್ದಾರೆ.
ಹಾಗೆಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕರಾದ ಎೆಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹಾಗೂ ಎಸ್ ದ್ಯಾವೇಗೌಡ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಬಾಲಕೃಷ್ಣ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸರಳ ವ್ಯಕ್ತಿತ್ವದ ಸೌಮ್ಯ ಸ್ವಭಾವ ದವರಾಗಿದ್ದರು. ಸ್ನೇಹ ಜೀವಿ ಸಹ ಆಗಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಕ್ಕೆ ದು:ಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.