ಜಿಲ್ಲಾ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ ಮೂರ್ತಿ ಅವರಿಗೆ ಸನ್ಮಾನ

ಜಿಲ್ಲಾ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ ಮೂರ್ತಿ ಅವರಿಗೆ ಸನ್ಮಾನ
Published on

ಹಾಸನ : ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪತ್ರಿಕಾ ರಂಗವನ್ನು ಪ್ರವೇಶಿಸಿದ ನಾನು ಕೇವಲ ಪತ್ರಿಕೆಯಿಂದ ಮಾತ್ರ ಗುರಿ ಸಾಧನೆ ಅಸಾಧ್ಯ ಎಂದು ಅರಿತು ಚಳವಳಿಗೆ ಧುಮುಕಬೇಕಾಯಿತು ಎಂದು ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ ಮೂರ್ತಿ ಅವರು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದಿಂದ ಬುಧವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಡಿ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು. 1977ರಲ್ಲಿ ’ಜನತಾ ಮಾಧ್ಯಮ’ ಪತ್ರಿಕೆಯ ಪಾಲುದಾರ ಮತ್ತು ಉಪ ಸಂಪಾದಕನಾಗಿ ಸೇವೆ ಆರಂಭಿಸಿದೆ. ಬೆಂಗಳೂರಿನಲ್ಲಿ ’ನಮ್ಮ ನಾಡು’ ಪತ್ರಿಕೆಯಲ್ಲೂ ಸಹ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮದ ಸುದೀರ್ಘ ಪಯಣ ಅವಿಸ್ಮರಣೀಯವಾಗಿದೆ. ಸಾಕಷ್ಟು ಏಳು ಬೀಳು, ಕಷ್ಟ-ನಷ್ಟಗಳನ್ನು ಈ ಕ್ಷೇತ್ರದಲ್ಲಿ ಅನುಭವಿಸಿದ್ದೇನೆ. ಕೆಲಸದ ಜೊತೆಗೆ ಉತ್ತಮ ತಂಡ ಜೊತೆಗೆ ನಿಂತಿದ್ದರಿಂದ ಹೋರಾಟಕ್ಕೆ ಮುನ್ನುಗ್ಗಿದೆ ಎಂದರು.
ಸಮಾಜವಾದಿ ಚಳವಳಿ, ಜೆಪಿ ಚಳುವಳಿ, ರೈತ ಚಳವಳಿ ಹಿನ್ನಲೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಪತ್ರಕರ್ತನಾಗಿ ಮಾಡುವ ಕೆಲಸ ಎಂದರೆ ಬರವಣಿಗೆ ಮಾತ್ರ. ಆದರೆ ಅದರಿಂದ ಸಮಸ್ಯೆಗೆ ಮುಕ್ತಿ ಸಿಗಲು ಸಾಧ್ಯವಿಲ್ಲ ಎಂಬುದನ್ನು ಅರಿತು ನಾನೇ ಸಂಘಟನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಘಟಿತ ಪ್ರಯತ್ನ ಮಾಡಬೇಕಾಯಿತು ಎಂದು ಹೇಳಿದರು.
ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ:
ಪ್ರಸ್ತುತ ಪತ್ರಿಕೋದ್ಯಮದ ಕುರಿತು ಯೋಚಿಸಿದರೆ ಭಯದ ವಾತಾವರಣ ಸೃಷ್ಟಿಯಾಗಿದೆ. ಆಧುನಿಕತೆ ಬೆಳೆದಂತೆ ಪತ್ರಿಕಾ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಪತ್ರಕರ್ತ ತನ್ನ ಜವಾಬ್ದಾರಿ ಏನೆಂಬುದನ್ನು ಅರಿಯಬೇಕು. ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕಿರುವ ಪತ್ರಕರ್ತ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದರು.
ಇಂದು ಸಮಾಜ ಮತ್ತು ಭಾರತ ತುಂಬ ಕಷ್ಟದ ಪರಿಸ್ಥಿತಿಗೆ ಸಿಲುಕಿದೆ. ಈ ಬಗ್ಗೆ ಪತ್ರಕರ್ತರು ಧ್ವನಿ ಎತ್ತಬೇಕು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನಮ್ಮ ಮನೆಗೆ ಬಂದು ಗೌರವವನ್ನು ಸಲ್ಲಿಸಿರುವುದಕ್ಕೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಅವರು ಮಾತನಾಡಿ, ಪತ್ರಿಕೋದ್ಯಮ ಇವತ್ತು ಜೀವನೋಪಾಯದ ಮಾರ್ಗವಾಗಿದೆ. ಆದರೆ, ಆರ್.ಪಿ.ವೆಂಕಟೇಶ್ ಮೂರ್ತಿ ಅವರ ದೃಷ್ಟಿಯಲ್ಲಿ ಪತ್ರಿಕಾ ಕ್ಷೇತ್ರ ಸಾಮಾಜಿಕ ಸೇವೆಯ ಉದ್ದೇಶ ಹೊಂದಿತ್ತು ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಎಚ್.ಬಿ. ಮದನ್‌ಗೌಡ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರವಿ ನಾಕಲಗೂಡು, ಸಂಘದ ಪ್ರಧಾನ ಕಾರ್ಯದರ್ಶಿ ಬನವಾಸೆ ಮಂಜು, ಉಪಾಧ್ಯಕ್ಷ ವೇಣುಕುಮಾರ್, ಹರೀಶ್, ಹೆತ್ತೂರ್ ನಾಗರಾಜು, ಕೆ.ಆರ್. ಮಂಜಣ್ಣ, ಪ್ರಸನ್ನಕುಮಾರ್, ಬಿ.ಆರ್.ಉದಯಕುಮಾರ್, ಅತೀಖುರ್ ರೆಹಮನ್, ಚಲಂ, ವೆಂಕಟೇಶ್, ಉದಯರವಿ, ನಟರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net