

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಡೈರಿಯನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ರಾಜಕಾರಣ ಸೇವಾ ಕ್ಷೇತ್ರವಾಗಿ ಉಳಿದಿಲ್ಲ. ಬೇರೆ ಬೇರೆ ಪಕ್ಷಗಳಿಂದ ಗೆದ್ದು ಸಂವಿಧಾನ, ಸಮಾನತೆ ಮೊದಲಾದವುಗಳ ಬಗ್ಗೆ ಮಾತನಾಡುವವರು ನಂತರ ಅದರಂತೆ ನಡೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಹಲವಾರು ಪತ್ರಕರ್ತರೂ ಹೊರತಲ್ಲ ಎಂದರು.
ಉದ್ಯಮಿ ಪಿ.ವಿ.ಗಿರಿ ಮಾತನಾಡಿ, ಈ ಹಿಂದೆಲ್ಲ ಬೆಳಗ್ಗೆ ಪತ್ರಿಕೆಗಳನ್ನು ಕಡ್ಡಾಯವಾಗಿ ಓದುವ ಪರಿಸ್ಥಿತಿ ಇತ್ತು. ಆದರೀಗ ಆ ಪರಿಸ್ಥಿತಿ ಇಲ್ಲ. ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗಿದೆ.
ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವಾರು ಬೇಡಿಕೆಗಳನ್ನು ಉದ್ಯಮಿಗಳು ಸರ್ಕಾರದ ಮುಂದಿಟ್ಟಿದ್ದರು. ಆದರೆ, ಅದು ಇನ್ನೂ ಈಡೇರಿಲ್ಲದಿರುವುದು ಬೇಸರದ ಸಂಗತಿ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಹಾಗೂ ಸಂಘದ ಸದಸ್ಯರು ಇದ್ದರು.