

ಹಾಸನ: ನರೇಗಾ ಸೇರಿದಂತೆ ನಾನಾ ಯೋಜನೆಯ ಅನುಷ್ಠಾನಕ್ಕೆ ಕಾಮಗಾರಿಗಳ ಗುತ್ತಿಗೆ ನೀಡುವ ವಿಚಾರದಲ್ಲಿ ಲಂಚ ಪಡೆದು ಲೂಟಿ ಮಾಡಲಾಗುತ್ತಿದ್ದು, ತಕ್ಷಣದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ತನಿಖೆಗೆ ಒಳಪಡಿಸಬೇಕು, ಇಲ್ಲವಾದರೆ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಎಚ್ಚರಿಸಿದರು.
ನಗರದ ಬಿ.ಎಂ. ರಸ್ತೆ ಬಳಿ ಇರುವ ಎಚ್‌ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಹೆಚ್ಚುವರಿ ಡಿಪಿಆರ್ ಅನುಮೋದನೆ ಪಡೆಯಲು ಗ್ರಾಮ ಪಂಚಾಯಿತಿ ಪ್ರತಿ ಸದಸ್ಯನಿಂದ ಶೇಕಡವಾರು ಕಮಿಷನ್ ಪಡೆಯಲಾಗುತ್ತಿದೆ. ಇತ್ತೀಚೆಗೆ ಅರಸೀಕೆರೆ ತಾಲೂಕಿನ ಪುರ್ಲೆಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಇಒ, ಸಿಇಒ ಸೇರಿದಂತೆ ಇತರೆ ಮೇಲಾಧಿಕಾರಿಗಳಿಗೆ ಹಣ ನೀಡಬೇಕು. ಆದ್ದರಿಂದ ಗುತಿ ್ತಗೆ ನೀಡಲು ಇಂತಿಷು ್ಟ ಹಣ ಕಡ್ಡಾಯವಾಗಿ ನೀಡಲೇಬೇಕು ಎಂದು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ದೂರಿದರು.
ಯಾವುದೇ ಗ್ರಾಮ ಸಭೆಯನ್ನು ನಡೆಸಲಾಗುತ್ತಿಲ್ಲ. ಸಂವಿಧಾನ ವಿರೋಧಿ ಕೆಲಸಗಳೇ ಆಗುತ್ತಿದ್ದು ಇದರ ವಿರುದ್ಧ ದೂರು ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಹೊಳೆನರಸೀಪುರ ತಾಲೂಕಿನ ಮೂಡಲಹಿಪೆ ್ಪ, ಹಳೆಕೋಟೆ, ಕಟ್ಟೆಪುರ ಗ್ರಾಮ ಪಂಚಾಯತಿಗಳಲ್ಲಿ ಅಧ್ಯಕ್ಷರ ಸಹಿ ಪಡೆಯದೆ ಹಲವು ಕಾಮಗಾರಿಗಳಿಗೆ ಒಪಿ ್ಪಗೆ ನೀಡಲಾಗಿದೆ. ಈ ರೀತಿ ನಾನಾ ಅಕ್ರಮಗಳು ನಡೆಯುತ್ತಿದ್ದು ಸಿಇಒ ಅವರನ್ನು ಅಮಾನತ್ತು ಮಾಡಬೇಕು ಹಾಗೂ ಇಲಾಖೆವಾರು ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಸಾತೇನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಅರುಣ್ ಕುಮಾರ್ ಅವರ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್ ಎಂಬುವರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮಾರ್ಚ್ 25 ರಂದು ದೂರು ನೀಡಿದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸುದ್ದಿಗೋಷ್ಠಿ ಮಾಡಿದ ನಂತರ ಮರುದಿನ ಎಫ್‌ಐಆರ್ ದಾಖಲಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಸೆಕ್ಷನ್ 121/1, 133 ಅಡಿ ದೂರು ದಾಖಲಾಗಿದೆ. ಮ್ಯಾಜಿಸ್ಟ್ರೇಟ್ ಮೂಲಕವೇ ಬೇಲ್ ಪಡೆಯಬೇಕಾಗಿದೆ. ಆದರೆ ಸ್ಟೇಷನ್ ಬೇಲ್ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಇನ್ನು ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ಹಾಸನ ಜಿಲ್ಲೆಯ ಸಂಸದರಾದ ಶ್ರೇಯಸ್ ಎಂ. ಪಟೇಲ್ ಬಾಯಿ ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಡಿಒ ಮೇಲೆ ಕೊಲೆ ಯತ್ನ ನಡೆದಿದೆ. ಈ ಸಂಬಂಧ ಸಿಸಿ ಕ್ಯಾಮೆರಾದಲ್ಲಿ ಪುರಾವೆ ಇದ್ದರೂ ಸಹ ಹಲ್ಲೆ ಮಾಡಿದ ಸದಸ್ಯನ ವಿರುದ್ಧ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸದೇ ಇರುವುದು ರಾಜಕೀಯ ಪ್ರೇರಿತವಾಗಿದೆ. ಈ ಬಗ್ಗೆ ಸಂಬಂಧಿಸಿದ ಸಚಿವರಿಗೆ ದೂರು ಕೊಡಲಾಗುವುದು. ಗ್ರಾಮ ಪಂಚಾಯಿತಿಯಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿರುವ ಬಗ್ಗೆ ಸಕಲೇಶಪುರ ಹಾಗೂ ಬೇಲೂರಿನ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಸಹ ಇದುವರೆಗೂ ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಕೂಡಲೇ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಜಿಲ್ಲೆಯಲ್ಲಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟರು.
ಸುದ್ದಿಗೋಷ್ಠಿಯಲ್ಲಿ ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ , ಸ್ವಾಮಿಗೌಡ, ಬ್ಯಾಂಕಿನ ನಿರ್ದೇಶಕ ಬಿದರಿಕೆರೆ ಜಯರಾಮ್ ಇತರರು ಉಪಸ್ಥಿತರಿದ್ದರು.