ಜಿಲ್ಲಾ ನಾಯಕ ಸಮುದಾಯದ ವತಿಯಿಂದ ಪ್ರತಿಭಟನೆ

02rajesh2
Published on

ಚಾಮರಾಜನಗರ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು, ಶ್ರೀಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ರಾಜ್ಯ ಸರ್ಕಾರ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಪ್ರತಿಭಟನೆ ನಡೆಸಿದ ಬಳಿಕ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಸಹಕಾರ ಸಚಿವ ರಾಜಣ್ಣ ಅವರು ಯಾವುದೇ ರೀತಿಯ ಭ್ರಷ್ಟಾಚಾರವಾಗಲಿ, ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡದೆ ಇದ್ದರೂ, ನೇರವಾಗಿ ಮಾತನಾಡುವ ಸ್ವಾಭಾವ ಅವರದ್ದಾಗಿದೆ. ಅವರಿಗೆ ಸರ್ಕಾರ ಯಾವುದೇ ಕಾರಣ ನೀಡದೇ ವಜಾಗೊಳಿಸಿರುವುದು ನಾಯಕ ಸಮುದಾಯಕ್ಕೆ ಮಾಡಿರುವ ಅನ್ಯಾಯವಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರಾಜಣ್ಣ ಅವರನ್ನು ಬೆಂಬಲಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮೂಲಕ ರಾಜಣ್ಣ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸಮುದಾಯ ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರ ಕೆ.ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಮುದಾಯದ ಸಚಿವರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ನಾಯಕ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸನಾಯಕ ಮಾತನಾಡಿ, ರಾಜ್ಯದಲ್ಲಿ ನಾಯಕ ಸಮುದಾಯದ ರಾಜಕೀಯ ಮುಖಂಡರುಗಳನ್ನು ತುಳಿಯುವ ಪ್ರಯತ್ನವನ್ನು ಎಲ್ಲಾ ಪಕ್ಷಗಳು ಮಾಡಿಕೊಂಡು ಬಂದಿವೆ. ರಾಜಕಾರಣಿಗಳಾದ ಶ್ರೀರಾಮುಲು, ರಾಜಣ್ಣ, ಅಧಿಕಾರಿಗಳಾದ ದಯಾನಂದ, ರವಿಚನ್ನಣ್ಣ ಹಾಗೂ ಇನ್ನಿತರೆ ಅಧಿಕಾರಿಗಳನ್ನು ನಿರಂತರವಾಗಿ ಶೋಷಣೆ ಮಾಡುತ್ತಿದ್ದಾರೆ. ಸರ್ಕಾರ ನಡೆಸುವವರಿಗೆ ಎಸ್ಸಿ, ಎಸ್‌ಟಿ ಜನರ ಮತ ಮಾತ್ರ ಬೇಕಾಗಿವೆ. ಅಧಿಕಾರ ಮಾತ್ರ ಬೇರೆಯವರಿಗೆ ಬೇಕಾಗಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಮತ್ತು ಸಮಾಜವಾದಿ ನಾಯಕರೆಂದು ಹೆಸರು ಪಡೆದಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲುವ ದಲಿತ ನಾಯಕರನ್ನು ಷಡ್ಯಂತ್ರ ಮಾಡಿ ಮಟ್ಟಹಾಕುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹದೇವನಾಯಕ, ಉದ್ಬೂರು ಮಹಾದೇವಸ್ವಾಮಿ, ದ್ಯಾವಪ್ಪನಾಯಕ, ಜಯಸುಂದರ್, ಕೆಂಪನಾಯಕ, ನಗರಸಭಾ ಅಧ್ಯಕ್ಷ ಸುರೇಶ್, ಸದಸ್ಯ ಶಿವರಾಜ್,

ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಾಚಪ್ಪ,ಉಪಾಧ್ಯಕ್ಷ ಎನ್.ಮಲ್ಲೇಶ್, ಆಲಗೂಡು ನಾಗರಾಜು, ಕಪನಿನಾಯಕ, ಬುಲೆಟ್ ಚಂದ್ರನಾಯಕ, ಶಿವುವಿರಾಟ್, ಸಾಗಡೆ ನಂಜುಂಡ ನಾಯಕ, ಹೊಮ್ಮ ರಾಮನಾಯಕ, ಮಹೇಂದ್ರ, ಮಣಿಕಂಠನಾಯಕ, ಪರಶಿವನಾಯಕ ಹಾಗೂ ಸಮುದಾಯದ ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net