

ಹಾಸನ: ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯುವ ದಿನ ಸಮೀಪಿಸಿದ ಹಿನ್ನೆಲೆಯಲ್ಲಿ ಸೋಮವಾರ ದೇವಿಯ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಜಿಲ್ಲಾಧಿಕಾರಿ ಆರ್. ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತರಾಜರಾಂ ಹಾಗೂ ತಹಸೀಲ್ದಾರ್ ಶಿವಶಂಕರಪ್ಪ ಸಮ್ಮುಖದಲ್ಲಿ ಖಜಾನೆಯಿಂದ ಒಡವೆ ಪೆಟ್ಟಿಗೆಯನ್ನು ಹೊರ ತಂದು ಹೂವಿನಿಂದ ಅಲಂಕೃತಗೊಂಡಿದ್ದ ಅಡ್ಡ ಪಲ್ಲಕ್ಕಿ ಮೇಲೆ ಇಟ್ಟು ಪೂಜೆ ಸಲ್ಲಿಸಲಾಯಿತು.
ನಂತರ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಒಡವೆಯನ್ನು ಹಾಸನಾಂಬೆ ದೇವಸ್ಥಾನಕ್ಕೆ ತರಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಾಲಯದ ಬಾಗಿಲನ್ನು ಅಶ್ವೀಜ ಮಾಸದ ಪ್ರಥಮ ಗುರುವಾರವಾದ ನವೆಂಬರ್ 5 ರಂದು ಮಧ್ಯಾಹ್ನ 12.30ಕ್ಕೆ ತೆರೆಯಲಾಗುತ್ತದೆ.
ಈ ಬಾರಿ ಹಾಸನಾಂಬೆ ದೇವಾಲಯದ ಬಾಗಿಲನ್ನು ನವೆಂಬರ್ 16ರ ವರೆಗೂ ಗರ್ಭಗುಡಿ ಬಾಗಿಲು ತೆರೆದಿದ್ದರೂ ಕರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮೊದಲ ದಿನ ಆಹ್ವಾನಿತ ವಿಐಪಿಗಳಿಗೆ ಮಾತ್ರ ದೇವಸ್ಥಾನದ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ದೇವಿ ದರ್ಶನವನ್ನು ಪ್ರೊಜೆಕ್ಟರ್ ಮೂಲಕ ಹಾಗೂ ಟಿವಿ ಮಾಧ್ಯಮಗಳಲ್ಲಿ ನೋಡಲು ಅವಕಾಶ ಮಾಡಿ ಕೊಡಲಾಗುತ್ತಿದೆ.