

ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಬೆಳಿಗ್ಗೆ ವಿವಿಧ ಸಂಘ ಸಂಸ್ಥೆಗಳ ಮುಂಖಡರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತರರಿಗೆ ಜಾಗೃತಿ ಮೂಡಿಸಿದರು.
ಹಸಿರುಭೂಮಿ ಪ್ರತಿಷ್ಠಾನ ಮತ್ತು ಮುಂಜಾನೆ ಮಿತ್ರ, ಹಾಸನ ಲಯನ್ಸ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಗೋಲ್ಡ್, ರೋಟರಿ ಮಿಡ್ ಟೌನ್, ಭಾರತೀಯ ವಿಜ್ಞಾನ ಜ್ಞಾನ ಸಮಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸೀನಿಯರ್ ಇಂಟರ್ ನ್ಯಾಷನಲ್ ಛೇಂಬರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾ ಕ್ರೀಡಾಂಗಣದ ಸುತ್ತ ಮುತ್ತ ಸ್ವಚ್ಛತೆ ಮಾಡುವ ಮೂಲಕ ಗಮನ ಸೆಳೆದರು.
ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಪ್ರತಿನಿತ್ಯ ವಾಯು ವಿಹಾರ ಮಾಡುವವರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಲುಗಳು ಹಾಗೂ ತ್ಯಾಜ್ಯಗಳಿಂದ ತೊಂದರೆ ಆಗುತಿತ್ತು. ಇದನ್ನು ಮನಗಂಡ ವಿವಿಧ ಸಂಘ ಸಂಸ್ಥೆಗಳು ಇಂತಹ ಸ್ವಚ್ಛತೆಗೆ ಮುಂದಾಗಿ ಜಿಲ್ಲಾ ಕ್ರೀಡಾಂಗಣದ ಒಳಗೆ ಇದ್ದ ಕಲ್ಲು, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯವನ್ನು ತೆರವು ಮಾಡುವ ಕಾರ್ಯ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಕೂಡ ಇಂತಹ ಸ್ವಚ್ಛತೆ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್ ಮಾತನಾಡಿ, ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಂತಹ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದೇವೆ. ನಾವು ಸ್ವಚ್ಛತೆ ಮಾಡುವುದಕ್ಕಿಂತ ಜನರಲ್ಲಿ ಜಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ನೂರಕ್ಕೆ ನೂರರಷ್ಟು ನಾವೆ ಎಲ್ಲಾ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಜನರಲ್ಲಿ ಅರಿವು ಮೂಡಲಿ ಎಂದು ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ಪಿ. ಮೋಹನ್, ಹಸಿರುಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಗಿರಿಜಾಂಬಿಕ, ಖಜಾಂಚಿ ಭವಾನಿ, ವಶಂಕರಪ್ಪ, ಮುಂಜಾನೆ ಮಿತ್ರ ತಂಡದ ರಾಮೇಗೌಡ, ಖಜಾಂಚಿ ನಾಗರಾಜು, ಕಾರ್ಯದರ್ಶಿ ಬಲ್ಲೇನಹಳ್ಳಿ ರವಿಕುಮಾರ್, ಎಚ್.ಪಿ. ಅಶೋಕ್ ಕುಮಾರ್, ಬಿ.ಎಸ್. ಸೋಮಶೇಖರ್, ಎಚ್.ಕೆ. ನಾಗೇಶ್, ಎಚ್.ಆರ್. ಚಂದ್ರೇಗೌಡ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಬೀರ್ ಅಹಮದ್, ಇನ್ನರ್ ವೀಲ್ ಕ್ಲಬ್ ಆಫ್ ಗೋಲ್ಡ್ ಅಧ್ಯಕ್ಷೆ ಡಾ. ತನುಜಾ ಇತರರು ಉಪಸ್ಥಿತರಿದ್ದರು.