

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಯೋಗಾಸಕ್ತರು ಪಾಲ್ಗೊಂಡು ಯೋಗ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಸದೃಢ ಆರೋಗ್ಯಕ್ಕೆ ಯೋಗ ತುಂಬಾ ಸಹಕಾರಿಯಾಗಿದೆ. ಮೊದಲ ಬಾರಿಗೆ ಶಾಸಕನಾಗಿ ಯೋಗ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಇಲ್ಲಿ ಪಾಲ್ಗೊಂಡ ಎಲ್ಲರೂ ಯೋಗ ಮಾಡುವ ಮೂಲಕ ಮೈ- ಮನಸ್ಸನ್ನು ಹಗುರ ಮಾಡಿಕೊಂಡಿದಿರಾ. ಎಲ್ಲರೂ ಪ್ರತಿದಿನ ಯೋಗ ಮಾಡುವುದರಿಂದ ಅದರಿಂದ ಸಾಕಷ್ಟು ಆರೋಗ್ಯ ವೃದ್ಧಿಯಾಗಲಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ. ಯೋಗ ಮಾಡಿ ರೋಗಮುಕ್ತರಾಗಿ ಜೀವಿಸಿ ಎಂದು ಕರೆ ನೀಡಿದರು
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 9ನೇ ವಿಶ್ವ ಯೋಗ ದಿನ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯ ಎಲ್ಲಾ ಯೋಗ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದ್ದಾರೆ ಎಂದರು.
ನಾನು ಕೂಡ ಇದೇ ಮೊದಲ ಬಾರಿಗೆ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಅಭ್ಯಾಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮ ತರಬೇತುದಾರರನ್ನು ಹುಡುಕಿ ಅವರ ಮೂಲಕ ದಿನನಿತ್ಯ ಯೋಗ ಅಭ್ಯಾಸ ಮಾಡುತ್ತೇನೆ. ಯೋಗದಿಂದ ಉತ್ತಮ ಆರೋಗ್ಯ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಆದ್ದರಿಂದ ಎಲ್ಲರೂ ಯೋಗಾಭ್ಯಾಸ ಮಾಡುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯತಿ ಸಿಇಒ ಬಿ.ಆರ್. ಪೂರ್ಣಿಮಾ, ಡಿಎಚ್‌ಒ ಶಿವಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಪೌರಾಯಕ್ತ ಸತೀಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಮಹಾಲಿಂಗಯ್ಯ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಘ- ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.