

ತುಮಕೂರು: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮೂಲಸೌಕರ್ಯ ಇಲ್ಲ ಎಂಬ ದೂರುಗಳು ಜಾಸ್ತಿಯಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನೊಬ್ಬ ಆಸ್ಪತ್ರೆ ನರಕ ದರ್ಶನವನ್ನು ವಿಡಿಯೋ ಮಾಡಿ ಮಾಧ್ಯಮಗಳಿಗೆ ಕಳುಹಿಸಿದ್ದು, ಆಸ್ಪತ್ರೆಯಲ್ಲಿ ರೋಗಿಗಳನ್ನು ಮನುಷ್ಯರಂತೆ ನೋಡುತ್ತಿಲ್ಲ ಎಂದು ದೂರಿದ್ದಾನೆ.
ಕೋವಿಡ್‌ಗೆ ಭಯಪಡುವ ಅವಶ್ಯಕತೆ ಇಲ್ಲ ಎಂಬುದು ನಮ್ಮ ಸ್ವ ಅನುಭವಕ್ಕೆ ಬಂದಿದ್ದು, ಆಸ್ಪತ್ರೆಯಲ್ಲಿ ಯಾವ ಔಷಧವನ್ನೂ ನೀಡುತ್ತಿಲ್ಲ, ಕುಡಿಯಲು ಬಿಸಿ ನೀರು, ಸ್ನಾನಕ್ಕೂ ಬಿಸಿ ನೀರು ನೀಡಿಲ್ಲ ಎಂದು ವಿಡಿಯೋದಲ್ಲೇ ಅಳಲು ತೋಡಿಕೊಂಡಿದ್ದಾನೆ.
ಪಾವಗಡ ಮೂಲದ ಯುವಕ ಮಾಡಿರುವ ವಿಡಿಯೋದಲ್ಲಿ ಆತನ ಜತೆ ಚಿಕಿತ್ಸೆ ಪಡೆಯುತ್ತಿರುವ ಮೂರ‌್ನಾಲ್ಕು ಜನರನ್ನೂ ಮಾತನಾಡಿಸಿದ್ದು ಅವರೂ ಕೂಡ ನಮಗೆ ಯಾವುದೇ ರೀತಿಯ ಚಿಕಿತ್ಸೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ರೋಗದ ಲಕ್ಷಣಗಳಿಲ್ಲದ ನಮಗೆ ಯಾವ ಔಷಧ ನೀಡದಿದ್ದರೂ ಆಸ್ಪತ್ರೆಯಲ್ಲಿ ಏಕೆ ಕೂಡಿ ಹಾಕಿದ್ದಾರೆ. ನಮಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು, ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನಾದರೂ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಒಮ್ಮೆ ಮಾತ್ರ ವೈದ್ಯರ ಭೇಟಿ!: ವಾರ್ಡ್ ನಲ್ಲಿ ರೋಗಿಗಳನ್ನು ಕೂಡಿ ಹೊರಗಡೆ ಸಿಬ್ಬಂದಿ ಕಾವಲು ಕಾಯುತ್ತಾರೆ, ದಿನಕ್ಕೆ ಒಮ್ಮೆ ವೈದ್ಯರು ಬಂದು ಶುಶ್ರೂಷಕರಿಗೆ ಗೈಡ್ ಮಾಡಿ ಹೋಗುವುದನ್ನು ಬಿಟ್ಟರೆ ರೋಗಿಗಳ ಜತೆ ಮಾತನಾಡುವುದಿಲ್ಲ. ವಾರಕ್ಕಾಗುವಷ್ಟು ಮಾತ್ರೆಗಳನ್ನು ಒಮ್ಮೆಗೆ ನೀಡಲಾಗಿದ್ದು, ಎಷ್ಟು ತೆಗೆದುಕೊಳ್ಳಬೇಕು ಎಂಬುದನ್ನೂ ತಿಳಿಸಿಲ್ಲ, ಸಕ್ಕರೆ, ಬಿಪಿ, ಹೃದಯ ಮತ್ತಿತರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಯಾವ ಪ್ರಮಾಣದಲ್ಲಿ ಔಷಧ ಸೇವಿಸಬೇಕು ಎಂದು ತಿಳಿಯದೇ ಪರದಾಡುವಂತಾಗಿದೆ.
ಪ್ಲಾಸ್ಟಿಕ್ ಕವರ್‌ನಲ್ಲಿ ಕಾಫಿ, ಟೀ!: ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ರೋಗಿಗಳಿಗೆ ನೀಡುವ ಊಟ, ನೀರಿನ ಬಗ್ಗೆಯೂ ಸಾಕಷ್ಟು ದೂರುಗಳಿವೆ. ಬಿಸಿ ನೀರು ಎಂದೂ ಬಿಸಿಯಾಗಿರುವುದಿಲ್ಲ ಎಂಬುದು ಸಾಮಾನ್ಯ ದೂರು. ಊಟವೂ ಸರಿಯಾದ ಸಮಯಕ್ಕೆ ಬರುವುದಿಲ್ಲ, ಸೋಮವಾರ ರಾತ್ರಿ 11 ಗಂಟೆಗೆ ಅನ್ನ, ಉಪ್ಪಿನಕಾಯಿ ನೀಡಿದ್ದಾರೆ ಎಂದು ವೃದ್ಧರೊಬ್ಬರು ಕಣ್ಣೀರು ಸುರಿಸಿದ್ದಾರೆ. ಕಾಫಿ, ಟೀ ಪ್ಲಾಸ್ಟಿಕ್ ಕವರ್‌ನಲ್ಲಿ ತಂದಿಟ್ಟು ಹೋಗಲಾಗುತ್ತಿದ್ದು ಅದನ್ನು ಕುಡಿಯಲು ಲೋಟ ಸಹ ನೀಡುವುದಿಲ್ಲ, ಶೌಚಗೃಹಗಳಂತೂ ಸಾಕ್ಷಾತ್ ನರಕ ದರ್ಶನ ಮಾಡಿಸುತ್ತಿವೆ, ರೋಗಿಗಳ ಹೆಸರಿನಲ್ಲಿ ಹಣದ ಅವ್ಯವಹಾರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವಾರ್ಡ್‌ನಲ್ಲಿ ನಮಗೆ ಯಾವುದೇ ಔಷಧ ನೀಡಿಲ್ಲ, ಈ ಬಗ್ಗೆ ಸಾಂತ್ವನ ಹೇಳುವವರೂ ಇಲ್ಲ, ಯಾವುದೇ ಲಕ್ಷಣವಿಲ್ಲದ ನಮ್ಮನ್ನೆಲ್ಲ ಕೂಡಿಟ್ಟಿರುವುದು ಮಾನಸಿಕವಾಗಿ ಹಿಂಸೆಯಾಗಿದೆ, ಒಂದೆರೆಡು ದಿನ ಕಾದು ಇಲ್ಲಿಂದ ಪರಾರಿಯಾಗುತ್ತೇನೆ. ಚಿಕಿತ್ಸೆ ಪಡೆಯುತ್ತಿರುವ ಯುವಕ (ವಿಡಿಯೋದಲ್ಲಿ ಹೇಳಿರುವುದು)