ಜಿಲ್ಲಾ ಕೇಂದ್ರದಲ್ಲೇ ಕಾಯಂ ಜನತಾ ನ್ಯಾಯಾಲಯದ ಕಲಾಪ

CTD---006
Published on

ಚಿತ್ರದುರ್ಗ: ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ವಿವಾದಗಳನ್ನು ರಾಜೀ ಮತ್ತು ವಿಚಾರಣೆ ಮೂಲಕ ತ್ವರಿತ ಇತ್ಯರ್ಥಗೊಳಿಸಲು ಪ್ರತಿ ಕಂದಾಯ ವಿಭಾಗ ಮಟ್ಟದಲ್ಲಿ ಕಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್‌ವಾಸುದೇವ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಕ್ಷಿದಾರರ ಅನುಕೂಲಕ್ಕಾಗಿ ಕಂದಾಯ ವಿಭಾಗದ ಜಿಲ್ಲಾ ಕೇಂದ್ರಗಳಲ್ಲೂ ನಿಯಮಿತವಾಗಿ ವಿಚಾರಣೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿವಿಧ ಸೌಲಭ್ಯಗಳನ್ನು ಒದಗಿಸುವ ಸೇವಾ ವಲಯಗಳ ವ್ಯಾಪ್ತಿಯಲ್ಲಿ 1 ಕೋಟಿ ರೂ. ಮೌಲ್ಯದವರೆಗಿನ ಕ್ಲೈಮ್/ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾರಿಗೆ, ಅಂಚೆ, ದೂರವಾಣಿ, ವಿದ್ಯುತ್, ಬೆಳಕು, ನೀರು ಸರಬರಾಜು ಮಾಡುವ ಯಾವುದೇ ಸಂಸ್ಥೆಗಳ ಸೇವೆಗಳು, ಎಲ್‌ಪಿಜಿ, ಸಾರ್ವಜನಿಕ ನೈರ್ಮಲ್ಯ, ವಿಮೆ, ಆಸ್ಪತ್ರೆ ಮತ್ತು ಔಷಧಾಲಯ, ಬ್ಯಾಂಕ್, ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ಗೃಹ ಮತ್ತು ರಿಯಲ್ ಎಸ್ಟೇಟ್‌ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಾಯಂ ಜನತಾ ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಇವುಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾರ್ವಜನಿಕ ಉಪಯುಕ್ತತಾ ಸೇವೆಗಳು ಕೂಡ ಈ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಇತರೆ ನ್ಯಾಯಾಲಯ, ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕೋರ್ಟ್‌ಗಳಿಗಿಂತ ಕಾಯಂ ಜನತಾ ಕೋರ್ಟ್ ಭಿನ್ನವಾಗಿದೆ. ಅರ್ಜಿದಾರರು ಯಾವುದೇ ಶುಲ್ಕವಿಲ್ಲದೆ ನೇರ ಅಥವಾ ವಕೀಲರ ಮೂಲಕ ಇಲ್ಲಿ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದರು.

ಉಭಯ ಪಕ್ಷಗಾರರು ರಾಜೀ ಸಂಧಾನಕ್ಕೆ ಒಪ್ಪದಿದ್ದರೆ, ವಿವಾದದ ತ್ವರಿತ ವಿಚಾರಣೆ ಮೂಲಕ ತೀರ್ಪು ನೀಡಲಾಗುತ್ತದೆ. ಇಲ್ಲಿಯ ತೀರ್ಪನ್ನು ಯಾವುದೇ ಸಿವಿಲ್, ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿರುವುದಿಲ್ಲ. ಹೈಕೋರ್ಟ್‌ಗೆ ರಿಟ್ ಸಲ್ಲಿಸಲು ಮಾತ್ರ ಅವಕಾಶವಿದೆ. ಜಿಲ್ಲಾ ನ್ಯಾಯಾಲಗಳ ಮೂಲಕ ಜನತಾ ನ್ಯಾಯಾಲಯದ ಆದೇಶ ಅನುಷ್ಠಾನಗೊಳಿಸಲಾಗುತ್ತದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರು ಅಧ್ಯಕ್ಷರಾಗಿ ಹಾಗೂ ಇಬ್ಬರು ನಾಮನಿರ್ದೇಶಿತ ಸದಸ್ಯರು ಈ ಕೋರ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಹಂತದಲ್ಲೇ ಪ್ರಕರಣಗಳ ವಿಚಾರಣೆ:

ಚಿತ್ರದುರ್ಗ ಜಿಲ್ಲೆಯ ಕಾಯಂ ಜನತಾ ನ್ಯಾಯಾಲಯ ಬೆಂಗಳೂರಿನಲ್ಲಿದೆ. ಆದರೆ, ಇನ್ನು ಮುಂದೆ ಸಾರ್ವಜನಿಕರು ಜಿಲ್ಲಾ ನ್ಯಾಯಾಲಯದಲ್ಲೇ ಪ್ರಕರಣ ದಾಖಲಿಸಬಹುದು. ವಿಚಾರಣೆಗಾಗಿ ವಿಭಾಗಮಟ್ಟಕ್ಕೆ ತೆರಳಬೇಕಿಲ್ಲ. ವಾರ ಅಥವಾ 15 ದಿನಗಳಿಗೊಮ್ಮೆ ಕಾಯಂ ಜನತಾ ನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಪ್ರಕರಣಗಳನ್ನು ವಿಚಾರಣೆ ನಡೆಸುವರು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್, 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ವೀರಣ್ಣ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net