ಜಿಲ್ಲಾ ಕಾರ್ಯಕಾರಿ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಕೆ.ಎಂ.ಶ್ರಿನಿವಾಸ್ ನಾಮಪತ್ರ ಸಲ್ಲಿಕೆ

ಜಿಲ್ಲಾ ಕಾರ್ಯಕಾರಿ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಕೆ.ಎಂ.ಶ್ರಿನಿವಾಸ್ ನಾಮಪತ್ರ ಸಲ್ಲಿಕೆ
Published on

ಹಾಸನ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು ಜಿಲ್ಲಾ ಕಾರ್ಯಕಾರಿ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೇನೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಎಂ.ಶ್ರಿನಿವಾಸ್ ಅವರು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಜಿಲ್ಲಾ ನಿರ್ದೇಶಕ ಸ್ಥಾನ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಚುನಾವಣೆ ಪ್ರಾರಂಭವಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅ.28 ರಿಂದ ನ.7ರ ವರೆಗೆ ಇರಲಿದೆ. ಮುಂದೆ ನಡೆಯಲಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೂ ಆಕಾಂಕ್ಷಿಯಾಗಿದ್ದೇನೆಂದರು.

ನಾಮಪತ್ರ ಸಲ್ಲಿಸಲು ಬಂದರೆ ಇಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಸಂಘದಲ್ಲಿ ಒಂದು ಶೌಚಾಲಯ ಇಲ್ಲ. ಸರಿಯಾದ ಕಟ್ಟಡವಿಲ್ಲ. ಹೊಸ ಕಟ್ಟಡದ ಅವಶ್ಯಕತೆ ಹಾಗು ಸರ್ಕಾರಿ ನೌಕರರ ಒಂದು ಸಮುದಾಯ ಭವನದ ನಿರ್ಮಾಣ ಮಾಡಬೇಕು. ನಿವೃತ್ತ ನೌಕರರಿಗೆ ಅನುಕೂಲವಾಗುವ ಕೆಲಸ ಮಾಡುವುದು ಸೇರಿ ಇತರೆ ಅನೇಕ ಮೂಲಸೌಕರ್ಯವನ್ನು ಸರ್ಕಾರಿ ನೌಕರರಿಗೆ ಕೊಡಬೇಕು ಎಂದು ತಮ ಉದ್ದೇಶ ತಿಳಿಸಿದರು.

ಇನ್ನೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮುಂದೆ ಇಲ್ಲಿ ಯಾವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಯುವಕರಿಗೆ ಹೆಚ್ಚಿನ ಅವಕಾಶ ಕೊಡಬೇಕು ಎಂಬುದು ನನ್ನ ಆಶಯ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕ ಮಧು, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಸತೀಶ್, ಬಸವರಾಜು, ಸುರೇಶ್, ಅನಿಲ್, ಮಹೇಶ್, ಪ್ರದೀಪ್, ಪುಟ್ಟಸ್ವಾಮಿಗೌಡ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net