ಜಿಲ್ಲಾ ಕಾಂಗ್ರೆಸ್​ ಸಾರಥಿ ಆಯ್ಕೆಗೆ ಕಸರತ್ತು

Published on

21ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆಗೆ ಮುಂದಾಗಿರುವ ರಾಜ್ಯ ಕೆಪಿಸಿಸಿ

ತುಮಕೂರು: ಕಳೆದ ವಿಧಾನಸಭೆ ಚುನಾವಣೆ ನಂತರ ಜಡವಾಗಿರುವ ಜಿಲ್ಲಾ ಕಾಂಗ್ರೆಸ್​ ಸಮಿತಿಗೆ ಚುರುಕು ನೀಡಲು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ ಹುಡಕಾಟ ಆರಂಭವಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಮುಂದಾಗಿರುವ ಕೆಪಿಸಿಸಿ ತುಮಕೂರು ಜಿಲ್ಲೆಯಲ್ಲಿಯೂ ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಲು ಪಕ್ಷದ ಹಿರಿಯ ಮುಖಂಡರನ್ನು ವೀಕ್ಷಕರನ್ನಾಗಿ ನೇಮಿಸಿದೆ. ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರ ಹೆಸರು ಸೂಚಿಸಲು ಮಾಜಿ ಸಂಸದರಾದ ಜಯಪ್ರಕಾಶ್​ ಹೆಗ್ಡೆ, ರಾಜೀವ್​ಗೌಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ್​.ಎಚ್​.ಜಕ್ಕಪ್ಪನವರ್​ ಅವರನ್ನು ನೇಮಿಸಲಾಗಿದೆ.

ವೀಕ್ಷಕರು ಶ್ರೀದಲ್ಲಿಯೇ ಜಿಲ್ಲೆಗೆ ಆಗಮಿಸಿ ಪ್ರಮುಖ ಮುಖಂಡರು, ಡಿಸಿಸಿ ಪದಾಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಇರುವ ಪಕ್ಷ ಸಂಟನೆ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಜಿಲ್ಲಾಧ್ಯಕ್ಷರ ಹುದ್ದೆಗೆ ಒಮ್ಮತದ ವ್ಯಕ್ತಿಯನ್ನು ಸೂಚಿಸಲು ಚರ್ಚೆ ನಡೆಸಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ಒಬಿಸಿ ಪ್ರತಿನಿಧಿಸುವ ಚಂದ್ರಶೇಖರಗೌಡ ಜಿಲ್ಲಾಧ್ಯಕ್ಷ ಸ್ಥಾನದಲ್ಲಿದ್ದು, ನೂತನ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಶ್ರೀದಲ್ಲಿಯೇ ಜಿಪಂ, ತಾಪಂ ಹಾಗೂ ತುಮಕೂರು ಮಹಾನಗರ ಪಾಲಿಕೆ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಜಿಲ್ಲೆಯ ಪರಿಚಯವಿರುವ ಮೇಟಿಯ ಅಗತ್ಯ ಜಿಲ್ಲಾ ಕಾಂಗ್ರೆಸ್​ಗಿದೆ. ಪ್ರಸ್ತುತ ಏಳು ಜನ ಶಾಸಕರಿದ್ದರೂ ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಹಾಗಾಗಿ ಜಿಪಂ, ತಾಪಂ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಹುಡುಕಿ ಪಕ್ಷ ಸಂಟನೆಗೆ ಶ್ರಮಿಸಬಲ್ಲ ಸಮರ್ಥರಿಗೆ ಅಧ್ಯಕ್ಷ ಗಾದಿ ಒಲಿಯಲಿದೆ.

ಲಿಂಗಾಯತ, ಒಕ್ಕಲಿಗರಿಗೆ ನೀಡಲಿ: ಪ್ರಸ್ತುತ ಕಾಡುಗೊಲ್ಲ ಸಮುದಾಯದ ಚಂದ್ರಶೇಖರಗೌಡ ಜಿಲ್ಲಾಧ್ಯಕ್ಷ ಸ್ಥಾನದಲ್ಲಿದ್ದು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿಗೆ ಅಧ್ಯಕ್ಷರಾಗಿಯೂ ನೇಮಕವಾಗಿರುವುದು ಜಿಲ್ಲಾ ಕೈ ಅಧ್ಯಕ್ಷ ಸ್ಥಾನ ಬದಲಾವಣೆ ಖಚಿತ ಎನ್ನಿಸಿದೆ. ಇವರಿಗೂ ಮುಂಚೆ ದಲಿತ ಸಮುದಾಯದ ಆರ್​.ರಾಮಕೃಷ್ಣ, ಕೆಂಚಮಾರಯ್ಯ ಜಿಲ್ಲಾಧ್ಯಕ್ಷ ಸ್ಥಾನ ನಿಭಾಯಿಸಿದ್ದಾರೆ. ಪ್ರಸ್ತುತ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಕಾಂಗ್ರೆಸ್​ ಪಕ್ಷದ ಪ್ರಮುಖ ಓಟ್​ಬ್ಯಾಂಕ್​ ಎನ್ನಿಸಿರುವ ಒಬಿಸಿ ಹಾಗೂ ದಲಿತ, ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ್ದರು. ಕಾಂಗ್ರೆಸ್​ ಜತೆ ಅಷ್ಟೇನೂ ಗುರುತಿಸಿಕೊಳ್ಳದ ಜಿಲ್ಲೆಯ ಪ್ರಮುಖ ಸಮುದಾಯ ಎನ್ನಿಸಿರುವ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಚರ್ಚೆ ಆರಂಭವಾಗಿದೆ. ಯಾರೇ ವೀಕ್ಷಕರು ಬಂದು ಎಷ್ಟೇ ಚರ್ಚೆ ನಡೆಸಿದರೂ ತುಮಕೂರು ಜಿಲ್ಲೆಯ ಪಾಲಿಗೆ ಸಚಿವರಾದ ಡಾ.ಜಿ.ಪರಮೇಶ್ವರ ಹಾಗೂ ಕೆ.ಎನ್​.ರಾಜಣ್ಣ ಒಪ್ಪಿದವರಷ್ಟೇ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಲು ಸಾಧ್ಯವಿದ್ದು ಇಂತಹ ಚರ್ಚೆಗಳಿಗೆ ಮಹತ್ವವಿಲ್ಲದಂತಾಗಿದೆ.

ಡಿಸಿಸಿ ಬ್ಯಾಂಕ್​ಗೂ ಶ್ರೀದಲ್ಲಿಯೇ ಚುನಾವಣೆ: ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅಧ್ಯಕ್ಷರಾಗಿರುವ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ಗೆ ಶ್ರೀದಲ್ಲಿಯೇ ಚುನಾವಣೆ ನಡೆಯಲಿದ್ದು, ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿಗೆ ಚುನಾವಣಾ ದಿನಾಂಕ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ.ಅರ್ಹ/ಅನರ್ಹ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಸದಸ್ಯ ಸಹಕಾರ ಸಂಗಳಿಗೆ ಅವಕಾಶವಿದೆ. ಜಿಲ್ಲಾಧಿಕಾರಿ, ಜಿಲ್ಲಾ ಸಹಕಾರ ಚುನಾವಣಾಧಿಕಾರಿ ಅಥವಾ ಬ್ಯಾಂಕ್​ ಸಿಇಒಗೆ ಸಮರ್ಥನೀಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು. ಡಿಸಿಸಿ ಬ್ಯಾಂಕ್​ ಚುನಾವಣೆಗೆ ಕೆ.ಎನ್​.ರಾಜಣ್ಣ ಈಗಾಗಲೇ ತಾಲೀಮು ನಡೆಸಿದ್ದು ಅವರನ್ನು ಮಣಿಸಲು ಒಂದು ತಂಡ ಚಿಕ್ಕನಾಯಕನಹಳ್ಳಿ, ಗುಬ್ಬಿ ಭಾಗದಲ್ಲಿಯೇ ಸದ್ದಿಲ್ಲದೆ ಅಣಿಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net