

ಚಾಮರಾಜನಗರ: ಗುತ್ತಿಗೆದಾರರ ಸಂಘದ ಸದಸ್ಯರು ನಡೆಸುತ್ತಿದ್ದ ಧರಣಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನೀಡಿದ ಭರವಸೆ ಮೇರೆಗೆ ಬುಧವಾರ ತಾತ್ಕಾಲಿಕವಾಗಿ ಕೈಬಿಟ್ಟರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ದಸರಾ ಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲು ಆಗಮಿಸಿದ್ದ ಸಚಿವರು ಧರಣಿ ನಡೆಯುತ್ತಿದ್ದ, ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಮನವಿ ಆಲಿಸಿದರು.
ಚಾಮರಾಜನಗರ ನಗರಸಭೆಯಲ್ಲಿ 17 ಕೋಟಿ ರೂ. ಒಂದೇ ಪ್ಯಾಕೇಜ್ ಮಾಡಿ ಟೆಂಡರ್ ಕರೆದಿರುವುದರಿಂದ ಸ್ಥಳೀಯ, ಸಣ್ಣ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಅರ್ಹತೆ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಸಚಿವರಿಗೆ ತಿಳಿಸಿದರು.
ಇದಕ್ಕೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿ, ಟೆಂಡರ್ ಪ್ಯಾಕೇಜ್ ರದ್ದು ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ಗೆ ಕೆಲವು ಸೂಚನೆಗಳನ್ನು ನೀಡಿದರು.
ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್.ಮಾದಯ್ಯ, ಪ್ರಧಾನ ಕಾರ್ಯದರ್ಶಿ ಚನ್ನಯ್ಯ, ಗೌರವಾಧ್ಯಕ್ಷ ಸಿ.ಕೆ.ಮಂಜುನಾಥ್, ತಾಲೂಕು ಅಧ್ಯಕ್ಷ ಬಂಗಾರು, ಟೆಂಡರ್ ಕಮಿಟಿ ಅಧ್ಯಕ್ಷ ನಲ್ಲೂರು ಮಹದೇವಸ್ವಾಮಿ, ಚಂದ್ರು, ಮಹದೇವಪ್ಪ, ನಾಗರಾಜು, ರವಿ, ಗಣೇಶ್ ಪ್ರಸಾದ್, ರಮೇಶ್, ಕೃಷ್ಣ ಇತರರಿದ್ದರು.