

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಪಕ್ಷ ಸಂಘಟನೆ ಮಾಡದೆ ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಶಿಷ್ಟಾಚಾರಕ್ಕೆ ಬಂದು ಹೋಗುವುದಾದರೆ ಇವರ ಅಗತ್ಯ ನಮಗಿಲ್ಲ.ಅವರನ್ನ ಬದಲಾವಣೆ ಮಾಡುವಂತೆ ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಡಿ.ದೊರೆಸ್ವಾಮಿ ಒತ್ತಾಯಿಸಿದರು.
ಜಿಲ್ಲಾ ಮಂತ್ರಿ ಬಾಯಿಗೆ ಬಂದ ಹಾಗೆ ಮಾತನಾಡಲು ಇದು ತುಮಕೂರಲ್ಲ, ಹಾಸನ ಜಿಲ್ಲೆಯಲ್ಲಿರುವವರು ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರು. ಜಿಲ್ಲೆಯ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅದನ್ನು ಬಿಟ್ಟು ತೃತೀಯ ದರ್ಜೆ ರಾಜಕಾರಣಿ ರೀತಿ ಮಾತನಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತುರುವುದಿಲ್ಲ ಕಿಡಿಕಾರಿದರು.
ನನಗೆ ಯಾರು ಹೇಳೋಹಾಗಿಲ್ಲ, ನನ್ನನ್ನು ಯಾರು ಕೇಳೋ ಹಾಗಿಲ್ಲ ಎಂದು ಉದ್ಧಟತನ ತೋರುವುದಾದರೆ ನಿಮಗೇಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನಬೇಕು? ಜವಾಬ್ದಾರಿಯಿಂದ ವಿಮುಕ್ತರಾಗಿ, ಯಾರೋ ಇಬ್ಬರಿಗೆ ಉಸ್ತುವಾರಿ ಸಚಿವರಾದರೆ ಸಾಲದು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸಲು ಶ್ರಮಿಸಬೇಕು. ಅದಕ್ಕಾಗಿಯೇ ಉಸ್ತುವಾರಿ ಜವಾಬ್ದಾರಿ ನೀಡಿರುವುದು. ಜಿಲ್ಲೆಯ ಜನರು ಕೆ.ಎನ್.ರಾಜಣ್ಣ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನೇಮಕವಾಗಿ 8 ತಿಂಗಳು ಕಳೆಯುತ್ತಾ ಬಂದರೂ ಪಕ್ಷ ಸಂಘಟಿಸುವ ಕೆಲಸ ಮಾಡಿಲ್ಲ, ಪದಾಧಿಕಾರಿಗಳ ಸಭೆ ನಡೆಸದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಸಚಿವರನ್ನು ಪ್ರಶ್ನಿಸುವ ಮುಖಂಡರನ್ನು ತುಚ್ಯವಾಗಿ ನಿಂದಿಸಿ ಉದ್ಧಟತನದ ವರ್ತನೆ ತೋರುತ್ತಿದ್ದಾರೆ. ಕಾರ್ಯಕರ್ತರ ಸಭೆ ನಡೆಸಿ ಎಂದರೆ ನಾನಿಲ್ಲಿಗೆ ಮಗಳ ಮದುವೆ ಮಾಡಲು ಬಂದಿಲ್ಲ, ನನಗೆ ಇವರೆಲ್ಲ ಲೆಕ್ಕಕ್ಕಿಲ್ಲ ಎಂದು ಉಡಾಫೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆಯೇ ಸಚವರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂದು ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಿದ್ದರೂ ತಮ್ಮ ವರ್ತನೆಯನ್ನು ಬದಲಿಸಿಕೊಂಡಿಲ್ಲ. ಸಚಿವರ ವರ್ತನೆ ಬಗ್ಗೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಿಯೋಗ ತೆರಳಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡುತ್ತೇವೆ. ಈ ಬಗ್ಗೆ ಎಐಸಿಸಿಗೂ ಪತ್ರ ಬರೆಯುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಾಜಿ ಸಚಿವ ಬಿ.ಶಿವರಾಮ್ ಅವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸಿವ ಅಗತ್ಯವೇನಿತ್ತು? ಜವಾಬ್ದಾರಿ ಸ್ಥಾನದಲ್ಲಿರುವವರು ಕೂರಿಸಿ ಮಾತನಾಡುವುದನ್ನು ಬಿಟ್ಟು ನಿಂದಿಸುವ ಮೂಲಕ ಪಕ್ಷದ ಎಲ್ಲಾ ಸ್ವಾಭಿಮಾನಿ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ. ಕಾರ್ಯಕರ್ತರನ್ನು ಕಡೆಗಣಿಸಿ, ಉದ್ಧಟತನದ ಹೇಳಿಕೆ ನೀಡುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶಿವರಾಮ್ ಅವರನ್ನು ನಿಂದಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸದಿದ್ದರೆ ಸಚಿವರ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡರಾದ ಗೋಪಾಲ್, ಮಹೇಂದ್ರ, ಎಸ್.ಕೆ.ರಾಜಣ್ಣ, ರಾಮಚಂದ್ರ, ಡಿ.ಟಿ.ಪ್ರಸನ್ನ ಹಾಜರಿದ್ದರು.