

ಧಾರವಾಡ: ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಬಾರದು ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆ ಮಾರುಕಟ್ಟೆಗೆ ಸಮೀಪವಿದೆ. ಇದಲ್ಲದೆ ಆಸ್ಪತ್ರೆಯ 100 ಮೀ. ಅಂತರದಲ್ಲಿ ಅನೇಕ ಮನೆಗಳಿವೆ. ಇಂತಹ ಸಂದರ್ಭದಲ್ಲಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿದರೆ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗುತ್ತದೆ ಎಂದರು.
ಕರೊನಾ ನಿಂತ್ರಣ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಲಾಕ್ಡೌನ್ ಅವಧಿಯಲ್ಲಿ ಪ್ರತ್ಯೇಕ ಆಸ್ಪತ್ರೆಯ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಕಾಲಹರಣ ಮಾಡಿ, ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಶೇ. 50ರಷ್ಟು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾರ್ಗಸೂಚಿ ಜಾರಿಗೆ ತರುವುದು ಅಸಾಧ್ಯ. ಹೀಗಾಗಿ ಜಿಲ್ಲಾ ಆಸ್ಪತ್ರೆಯನ್ನು ಇತರೆ ರೋಗಿಗಳ ತಪಾಸಣೆಗೆ ಬಿಟ್ಟು ಕಿಮ್ಸ್ನಲ್ಲೇ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ 48 ವಿಭಾಗಗಳಿದ್ದು, 44 ವೈದ್ಯರು ಹಾಗೂ 22 ಸ್ಟಾಫ್ ನರ್ಸ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ ಸಾವಿರಾರು ಹೊರ ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಾರೆ. ಜಿಲ್ಲಾಡಳಿತ ಬೇಕಿದ್ದರೆ ಕೈಗಾರಿಕೆ ಪ್ರದೇಶದಲ್ಲಿನ ಗೋದಾಮು, ವಿವಿಗಳಲ್ಲಿನ ವಸತಿ ನಿಲಯಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಿ ಎಂದು ಒತ್ತಾಯಿಸಿದರು.
ಒಂದು ವೇಳೆ ಜಿಲ್ಲಾಡಳಿತ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಜಿಲ್ಲೆಯ ಜನತೆ ಶಾಪ ತಟ್ಟಲಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನೀರಲಕೇರಿ ಎಚ್ಚರಿಸಿದರು.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ವಕೀಲ ಎಸ್.ಎ. ಪವಾರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.
EndFragment