ಜಿಲೆಟಿನ್ ಸ್ಫೋಟಕ್ಕೆ ಯತ್ನ, ಪೊಲೀಸರಿಂದ ದಾಳಿ

pixlr
Published on

ವಿಜಯಪುರ: ಈಗಾಗಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಚರ್ಚೆಗಳು ಆರಂಭಾಗಿವೆ. ಅಲ್ಲದೆ ಸಂಭಂದಿಸಿದ ಇಲಾಖೆಗಳು ಅಕ್ರಮವನ್ನು ಪತ್ತೆಹಚ್ಚುವ ಕೆಲಸ ಶುರು ಮಾಡಿವೆ. ಇದರ ಮದ್ಯೆಯೇ ವಿಜಯಪುರ ಜಿಲ್ಲೆಯಲ್ಲಿ ಜಿಲೆಟಿನ್ ಕಡ್ಡಿ ಬಳಸಿ ಸ್ಪೋಟಕ್ಕೆ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹೊಂಡದಲ್ಲಿ 96 ಹೋಲ್ ಹೊಡೆದು ಜಿಲೆಟಿನ್ ಕಡ್ಡಿ, ಬೂಸ್ಟರ್ಸ್ ತುಂಬಿದ್ದ ಖದೀಮರು ಇನ್ನೇನು ಬ್ಲಾಸ್ಟ್ ಮಾಡಬೇಕು ಅನ್ನುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಇಂಡಿ ತಾಲೂಕಿನ ಸೊನಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಿದ್ರಾಯ್ ಮೇತ್ರಿ ಎಂಬಾತನ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಜಿಲೆಟಿನ್ ಕಡ್ಡಿ ಮೂಲಕ ಸ್ಪೋಟಕ್ಕೆ ಯತ್ನ ಮಾಡಲಾಗಿತ್ತು. ವಿಜಯಪುರದ ಸಾಯಿ ಸ್ಟೋನ್ ಕ್ರಶರ್‌ನ ಅಶೋಕ ಬಂಡಿ ಎಂಬಾತನಿಂದ ಜಿಲೆಟಿನ್ ಸ್ಪೋಟಕ್ಕೆ ಯತ್ನ ನಡೆದಿತ್ತು. ಒಂದಲ್ಲ‌ ಎರಡಲ್ಲ‌ ಬರೋಬ್ಬರಿ 96 ಹೋಲ್ ಹೊಡೆದು ಜಿಲೆಟಿನ್ ಕಡ್ಡಿ ಹಾಗೂ ಬೂಸ್ಟರ್ಸ್ ತುಂಬಿ ಡೆಟೋನೆಟರ್ ಮೂಲಕ ಸ್ಪೋಟಕ್ಕೆ ಭಾರೀ ತಯಾರಿ ನಡೆಸಲಾಗಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರರ ಇಂಡಿ ಪೊಲೀಸರು. ಆದ್ರೆ ಅಷ್ಟರಲ್ಲಿ ಸ್ಪೋಟಕ್ಕೆ ಯತ್ನಿಸಿದ ಅಶೋಕ ಬಂಡಿ ಹಾಗೂ ಜಮೀನು ಮಾಲಿಕ ಸಿದ್ರಾಯ್ ಮೇತ್ರಿ ಪರಾರಿಯಾಗಿದ್ದಾರೆ. ಸ್ಪೋಟ ಪ್ರತಿಬಂಧಕ ಕಾಯ್ದೆ 4, 5, 5(B) ಅಡಿಯಲ್ಲಿ ಹೊರ್ತಿ ಪೊಲೀಸ್ ಠಾಣೆಯಲ್ಲಿ ಕೇ.ನಂ 89/2021 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವನ್ನು ತಡೆದಿರುವ ಇಂಡಿ ಡಿ ವೈ ಎಸ್ ಪಿ ಶ್ರೀಧರ ದೊಡ್ಡಿ ಅವರಿಗೆ ವಿಜಯಪುರ ಎಸ್ ಪಿ ಅನುಪಮ‌ ಅಗರವಾಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net