

ಗದಗ: ನಗರದ ಗದಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ (ಜಿಮ್್ಸ)ದಲ್ಲಿ ಅತ್ಯಾಧುನಿಕ ಸುಸಜ್ಜಿತ ಕರೊನಾ ಸೋಂಕು ತಪಾಸಣೆ ಪ್ರಯೋಗಾಲಯ ಆರಂಭಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಅಗತ್ಯ ಸಿದ್ಧತೆಯೂ ಪೂರ್ಣಗೊಂಡಿದೆ.
ಆದರೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮೋದನೆ ಬಾಕಿ ಇರುವುದರಿಂದ ಶಂಕಿತರ ಗಂಟಲ ದ್ರವದ ಮಾದರಿ ತಪಾಸಣೆ ಕಾರ್ಯ ಇನ್ನೂ ಎರಡು ದಿನ ವಿಳಂಬವಾಗುವ ಸಾಧ್ಯತೆ ಇದೆ.
ಸಾಮೂಹಿಕವಾಗಿ ತಪಾಸಣೆ ಮಾಡುವ ಮೂಲಕ ಕರೊನಾ ಸೋಂಕು ತಡೆಗಟ್ಟಲು ಪ್ರತಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕರೊನಾ ಟೆಸ್ಟಿಂಗ್ ಲ್ಯಾಬ್ ತೆರೆಯುವಂತೆ ಒತ್ತಾಯ ಕೇಳಿ ಬಂದಿತ್ತು. ಕಳೆದ ಎರಡು ದಿನಗಳ ಹಿಂದೆ ಸರ್ಕಾರ ಗದಗನ ಜಿಮ್ಸ್ನಲ್ಲಿ ಟೆಸ್ಟಿಂಗ್ ಲ್ಯಾಬ್ ತೆರೆಯಲು ಅನುಮತಿ ನೀಡಿದೆ. ಜಿಮ್ಸ್ನಲ್ಲಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಆದರೆ, ಐಸಿಎಂಆರ್ ಅನುಮತಿ ಸಿಗದಿರುವುದು ಸಮಸ್ಯೆಗೆ ಕಾರಣವಾಗಿದೆ.
ಜಿಮ್ಸ್ನಲ್ಲಿ ಕರೊನಾ ಶಂಕಿತರ ಗಂಟಲ ದ್ರವದ ಮಾದರಿ ಟೆಸ್ಟಿಂಗ್ ಆರಂಭವಾದರೆ, ಫಲಿತಾಂಶಕ್ಕಾಗಿ ಕಾಯುವುದು ತಪ್ಪಲಿದೆ. ಜತೆಗೆ ನಿಷೇಧಿತ ಪ್ರದೇಶದ ಜನರನ್ನು ತಪಾಸಣೆಗೊಳಪಡಿಸಿ ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಲು ಅನುಕೂಲವಾಗಲಿದೆ.
ನಾಲ್ಕು ದಿನಗಳ ಹಿಂದೆಯೇ ಸಚಿವ ಸಿ.ಸಿ. ಪಾಟೀಲ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹಕಾರದಿಂದ ಜಿಮ್ಸ್ನಲ್ಲಿ ಕರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್ ಆರಂಭಕ್ಕೆ ಅನುಮತಿ ಸಿಕ್ಕಿದೆ. ಇಂದಿನಿಂದಲೇ ಟೆಸ್ಟಿಂಗ್ ಆರಂಭಿಸಲಾಗುವುದು ಎಂದು ಹೇಳಿದ್ದರು. ಆದರೆ, ಐಸಿಎಂಆರ್ ಅನುಮತಿಯೇ ಸಿಕ್ಕಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಜಿಮ್ಸ್ನಲ್ಲಿ ಕರೊನಾ ಸೋಂಕು ಪತ್ತೆ ಹೆಚ್ಚುವ ಟೆಸ್ಟಿಂಗ್ ಲ್ಯಾಬ್ ಸಿದ್ಧಗೊಂಡಿದೆ. ದಿನವೊಂದಕ್ಕೆ ಕನಿಷ್ಠ 40 ಜನರ ಮಾದರಿ ತಪಾಸಣೆ ನಡೆಯಲಿದ್ದು, ಐಸಿಎಂಆರ್ ಅನುಮೋದನೆಗೆ ಕಾಯುತ್ತಿದ್ದೇವೆ.| ಡಾ.ಪಿ.ಎಸ್. ಭೂಸರಡ್ಡಿ ಜಿಮ್್ಸ ನಿರ್ದೇಶಕ, ಗದಗ
ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ
ಗದಗ: ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಅನಗತ್ಯವಾಗಿ ಹೊರಗಡೆ ಸಂಚಾರ ಮಾಡಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ ಎನ್. ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ತುರ್ತ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿಗಳು ಸಂಚಾರ ಮಾಡಬೇಕಾದ ಅವಶ್ಯಕತೆ ಕಂಡುಬಂದಲ್ಲಿ ನಾಲ್ಕು ಚಕ್ರ ವಾಹನದಲ್ಲಿ ಒಬ್ಬ ಚಾಲಕ ಒಬ್ಬ ಪ್ರಯಾಣಿಕ ಹಾಗೂ ದ್ವಿಚಕ್ರ ವಾಹನದಲ್ಲಿ ಬೈಕ್ ಸವಾರನೊಬ್ಬನೇ ಸಂಚಾರ ಮಾಡಲು ಅವಕಾಶವಿದೆ. ಸಾರ್ವಜನಿಕ ಸ್ಥಳದಲ್ಲಿ ಅವಶ್ಯಕ ಕರ್ತವ್ಯಕ್ಕೆ ಯಾರಾದರೂ ಹೊರಗಡೆ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಡಬೇಕು. ಸಾರ್ವಜನಿಕ ಸ್ಥಳದಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವ ಹಾಗಿಲ್ಲ. ಎಲ್ಲ ರೀತಿಯ ಸಾರ್ವಜನಿಕ ಸಂಚಾರ ವ್ಯವಸ್ಥೆಗಳನ್ನು ರದ್ದು ಮಾಡಲಾಗಿದೆ. ಸಾರಾಯಿ, ಗುಟ್ಖಾ, ತಂಬಾಕು ಮಾರಾಟ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ದಂಡನೀಯವಾಗಿದೆ. ಎಲ್ಲ ಸಾರ್ವಜನಿಕರು ಆರೋಗ್ಯ ಸೇತು ಆಪ್ ಅನ್ನು ಬಳಸಿಕೊಳ್ಳಬೇಕು. ಶಾಪಿಂಗ್ ಮಾಲ್ಗಳಲ್ಲಿ ಹಾಗೂ ಇತರೆ ಕಿರಾಣಿ-ತರಕಾರಿ ಮಾರಾಟ ಸ್ಥಳಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅಲ್ಲಿನ ಮಾಲೀಕರು ಅಥವಾ ಆಯೋಜಕರು ಮಾಸ್ಕ್ಗಳನ್ನು ಹಾಗೂ ಆಗಾಗ ಸ್ಯಾನಿಟೈಸರ್ ಬಳಸುವ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಸರದಿಯಂತೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಒಂದು ಸರದಿಯವರ ಕರ್ತವ್ಯ ಮುಗಿದ ಮೇಲೆ ಕನಿಷ್ಠ ಒಂದು ಗಂಟೆಯ ಕಾಲ ಆ ಸ್ಥಳದಲ್ಲಿ ಮುಂದಿನ ಸರದಿಗೆ ಬರುವ ಕೆಲಸಗಾರರನ್ನು ಕಳುಹಿಸದೇ ಆ ಸ್ಥಳದಲ್ಲಿ ಸಂಪೂರ್ಣವಾಗಿ ಸ್ಯಾನಿಟೈಸರ್ ಹಾಕಬೇಕು. ಯಾವುದೇ ರೀತಿಯ ಧಾರ್ವಿುಕ ಸ್ಥಳ (ಮಂದಿರ/ ಮಸೀದಿ / ಚರ್ಚ್) ಗಳನ್ನು ತೆರೆಯುವಂತಿಲ್ಲ. ಕೋವಿಡ್-19 ವಿರುದ್ಧದ ಕರ್ತವ್ಯದಲ್ಲಿ ತೊಡಗಿರುವ ಪೊಲೀಸ್, ವೈದ್ಯಕೀಯ, ಪೌರ ಕಾರ್ವಿುಕರಿಗೆ ಸಹಕರಿಸಬೇಕು. ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಬರಬೇಕಿದೆ 184 ಪ್ರಕರಣಗಳ ವರದಿ
ಗದಗ: ಜಿಲ್ಲೆಯ ಕರೊನಾ ಪಿಡುಗು ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಂಗಳವಾರ ಅಂಕಿ -ಅಂಶಗಳನ್ನು ಬಿಡುಗಡೆ ಮಾಡಿದೆ. ಇದುವರೆಗೆ ಜಿಲ್ಲೆಯಲ್ಲಿ 670 ಜನರು ನಿಗಾಕ್ಕೆ ಒಳಗಾಗಿದ್ದಾರೆ. 179 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 468 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ.
ಒಟ್ಟು 638 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಇದರಲ್ಲಿ 414 ವರದಿಗಳು ನೆಗೆಟಿವ್ ಬಂದಿದ್ದು, ಉಳಿದ 184 ಪ್ರಕರಣಗಳ ವೈದ್ಯಕೀಯ ವರದಿ ಬರಬೇಕಿದೆ. 36 ಪ್ರಕರಣಗಳು ತಿರಸ್ಕೃತಗೊಂಡಿವೆ. ಜಿಲ್ಲೆಯಲ್ಲಿ ಪಿ ನಂ 166, ಪಿ 304, ಪಿ 370, ಪಿ 396 ರೋಗಿಗಳಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಸುರತ್ಕಲ್ನಿಂದ ಲಕ್ಷ್ಮೇಶ್ವರಕ್ಕೆ ಬಂದವರ ಆರೋಗ್ಯ ವಿಚಾರಣೆ
ಲಕ್ಷ್ಮೇಶ್ವರ: ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ನಲ್ಲಿರುವ ಸುರತ್ಕಲ್ನಿಂದ ಗ್ಯಾಸ್ ಟ್ಯಾಂಕರ್ ಮೂಲಕ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಬಟ್ಟೂರ ಗ್ರಾಮದ 13 ಜನ ಕೂಲಿ ಕಾರ್ವಿುಕರನ್ನು ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಜಿ. ಸಲಗೆರೆ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು ಕರೊನಾ ಎಂಬುದು ಒಂದು ಸಾಂಕ್ರಾಮಿಕ ವೈರಾಣುವಾಗಿದ್ದು ಈ ಬಗ್ಗೆ ಜಾಗೃತೆ ಅಗತ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅತ್ಯಗತ್ಯ. ಎಲ್ಲರೂ ನಿಮ್ಮ ಕುಟುಂಬ, ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಅಂದ ಮಾತ್ರಕ್ಕೆ ನಿಮಗೆ ವೈರಸ್ ತಗುಲಿದೆ ಎಂದು ಅರ್ಥವಲ್ಲ, ನೀವು ಬಂದಿರುವ ಪ್ರದೇಶದಿಂದ ಸೋಂಕಿರುವ ವ್ಯಕ್ತಿ ನಿಮ್ಮ ಸಂಪರ್ಕಕ್ಕೆ ಬಂದಿದ್ದರೆ 14 ದಿನಗಳ ಕಾಲ ನಿಗಾ ವಹಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಇಡಲಾಗಿದೆ ಎಂದು ಹೇಳಿ ಆರೋಗ್ಯ ಕಿಟ್ ವಿತರಿಸಿದರು. ಇದೇ ಸಂದರ್ಭದಲ್ಲಿ ಕಾರ್ವಿುಕ ಇಲಾಖೆಯಿಂದ ಕಾರ್ವಿುಕರಿಗೆ ಕಿಟ್ಗಳನ್ನು ವಿತರಿಸಲಾಯಿತು. ಪಟ್ಟಣದ ದಿವಾಣಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಎಂ.ಆರ್. ಒಡೆಯರ್, ಕಿರಿಯ ದಿವಾಣಿ ನ್ಯಾಯಾಧೀಶ ಎನ್. ಪ್ರತಾಪಕುಮಾರ, ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಕಾರ್ವಿುಕ ಇಲಾಖೆ ಅಧಿಕಾರಿ ಸುಧಾ ಗರಗ, ಕಂದಾಯ ಅಧಿಕಾರಿ ಎಸ್.ಎಸ್. ಪಾಟೀಲ, ಇತರರಿದ್ದರು.