ಜಿಪಿಎಸ್​ನಲ್ಲಿ ಬೆಳೆ ಕ್ಷೇತ್ರವೇ ಅದಲು-ಬದಲು

6Kdl2
Published on

ಕುಂದಗೋಳ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಗೆ ರೈತರು ಹೆಸರು ನೋಂದಾಯಿಸುವಾಗ ಜಿಪಿಎಸ್​ನ ತಾಂತ್ರಿಕ ತೊಂದರೆಯಿಂದಾಗಿ ಬೆಳೆ ಕ್ಷೇತ್ರವೇ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಶೇಂಗಾ ಖರೀದಿಸಲು ಅಧಿಕಾರಿಗಳು ತಿರಸ್ಕರಿಸಿದ್ದರಿಂದ ರೈತರು ಗುರುವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮುಖಂಡ ಮುತ್ತು ಶಿವಳ್ಳಿ ಮಾತನಾಡಿ, ರೈತರು ಪ್ರಸಕ್ತ ವರ್ಷ ತಮ್ಮ ಹೊಲದಲ್ಲಿ ಶೇಂಗಾ ಬೆಳೆ ಬೆಳೆದಿದ್ದರೂ ಜಿಪಿಎಸ್​ನಲ್ಲಿ ಮಾತ್ರ ಹತ್ತಿ ಬೆಳೆ ಎಂದು ನಮೂದಾಗಿರುವುದರಿಂದ ಬೆಂಬಲ ಬೆಲೆಯಿಂದ ರೈತರು ವಂಚಿತರಾಗುತ್ತಿದ್ದಾರೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಸಮರ್ಪಕವಾಗಿ ಜಿಪಿಎಸ್ ಮಾಡಿರುವುದರಿಂದ ಈ ಅವಘಡ ಸಂಭವಿಸಿದೆ. ಇದರಿಂದ ಸಾವಿರಾರು ರೈತರು ಬೆಂಬಲ ಬೆಲೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ತಹಸೀಲ್ದಾರ್ ಬಸವರಾಜ ಮೇಳವಂಕಿ ಅವರು ರೈತರೊಂದಿಗೆ ಸಮಾಲೋಚಿಸಿ, ‘ನಿಮಗೆ ತೊಂದರೆ ಆಗದ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬೆಳೆ ದೃಢೀಕರಣ ಪತ್ರವನ್ನು ನಾವೇ ನೀಡುತ್ತೇವೆ. ಖರೀದಿ ಕೇಂದ್ರದಲ್ಲಿ ಇದನ್ನು ನೀಡಿ ನಿಮ್ಮ ಶೇಂಗಾ ಬೆಳೆಯನ್ನು ಮಾರಾಟ ಮಾಡಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ ಬಳಿಕ ಕಚೇರಿ ಬೀಗ ತೆರೆದರು.

ಮುಖಂಡ ಶೇಖಣ್ಣ ಬಾಳಿಕಾಯಿ, ಪರಶುರಾಮ ಕಲಾಲ, ರವಿ ಕಿರೇಸೂರ, ಶಿವಾನಂದ ಕೊಪ್ಪದ, ಉಮೇಶಗೌಡ ಅಲ್ಲಾಪೂರ, ಬಸವರಾಜ ಅಲ್ಲಾಪೂರ, ಜಿ.ಎಸ್. ಸುಂಕದ, ಎಸ್.ಬಿ. ಗೌಡಪ್ಪನವರ, ಬಸವರಾಜ ಹೂಗಾರ, ಮಂಜುನಾಥ ರಂಗನಾಯ್ಕರ, ಯು.ವೈ. ಪಾಟೀಲ, ಬಸವರಾಜ ರೇವಡೆಣ್ಣವರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net