

ಬೆಳಗಾವಿ: ಮುಂಬರುವ ಜಿಪಂ, ತಾಪಂ, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಶಕ್ತಿ ಪ್ರದರ್ಶಿಸಬೇಕು. ಅಲ್ಲದೆ, ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ನಮ್ಮದಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕರೆ ನೀಡಿದರು.
ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಪಕ್ಷದ ವಿವಿಧ ವಿಭಾಗಗಳಿಗೆ ನೇಮಕಗೊಂಡವರಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಕ್ವಿಂಟ್ ಇಂಡಿಯಾ ಚಳವಳಿ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ 3 ತಿಂಗಳಲ್ಲಿ ಜರುಗಲಿರುವ ಜಿಪಂ, ತಾಪಂ ಚುನಾವಣೆ ಮತ್ತು 2023ರ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಜವಾಬ್ದಾರಿ ವಹಿಸಿಕೊಂಡಿರುವವರು ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಸೂಚಿಸಿದರು.
ನಿರ್ಲಕ್ಷೃ ಮಾಡದಿರಿ: ಪಕ್ಷ ಸಂಘಟನೆಯಲ್ಲಿ ಸಕ್ರಿಯ ವಾಗಿರುವ, ಚುನಾವಣೆಗಳಲ್ಲಿ ಅಭ್ಯರ್ಥಿ ಗೆಲುವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಜಿಪಂ, ತಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಜಿಲ್ಲೆ, ತಾಲೂಕು, ಹೋಬಳಿ, ವಿಧಾನಸಭಾ ಕ್ಷೇತ್ರವಾರು ಜವಾಬ್ದಾರಿ ವಹಿಸಿಕೊಂಡಿರುವವರು ಇಂದಿನಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಯಾರೂ ನಿರ್ಲಕ್ಷೃ ಮಾಡಬಾರದು ಎಂದು ತಿಳಿಸಿದರು.
ಕಾರ್ಯಕರ್ತರಿಗೆ ಸ್ಥಾನಮಾನ: ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ (ಆಡಳಿತ) ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ಪ್ರದೀಪ ಎಂ.ಜೆ. ಸೇರಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮುಂಬರುವ ಎಲ್ಲ ಕ್ಷೇತ್ರಗಳ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಬೇಕು. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರಿಗೆ ವರಿಷ್ಠರು ನಿರಂತರವಾಗಿ ಬೆಂಬಲ ನೀಡುತ್ತಾರೆ. ಅಲ್ಲದೆ, ಒಳ್ಳೆಯ ಸ್ಥಾನಮಾನ ನೀಡಲಾಗುತ್ತಿದೆ. ಹಾಗಾಗಿ, 2023 ವಿಧಾನಸಭೆ ಚುನಾವಣೆ ಗುರಿಯಾಗಿಸಿಕೊಂಡು ಕಾರ್ಯಕರ್ತರು, ಮುಖಂಡರು ಶಕ್ತಿ ಪ್ರದರ್ಶಿಸಲು ವೇದಿಕೆ ನಿರ್ಮಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಿಪ್ಪಾಣಿ, ಅಥಣಿ, ರಾಯಬಾಗ, ಕುಡಚಿ ಸೇರಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ನಾಯಕರನ್ನು ನಿರ್ಮಾಣ ಮಾಡುವುದು ಅವಶ್ಯ. ಅಲ್ಲದೆ, 2023ರ ಚುನಾವಣೆಯಲ್ಲಿ ಹೊಸ ಮುಖಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ, ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ, ಅರವಿಂದ ದಳವಾಯಿ ಇತರರು ಇದ್ದರು.
ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿರುವ ಹಾಲಿ, ಮಾಜಿ ಶಾಸಕರು ಹಾಗೂ ಇನ್ನಿತರ ಮುಖಂಡರನ್ನು ವಾಪಸ್ ಪಕ್ಷಕ್ಕೆ ಕರೆತರುವುದು ವರಿಷ್ಠರಿಗೆ ಬಿಟ್ಟ ವಿಚಾರ. ಜಿಪಂ, ತಾಪಂ ಹಾಗೂ 2023ರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಒಂದೇ ನಮ್ಮ ಉದ್ದೇಶ. ಹಾಗಾಗಿ, ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ.| ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ