

ಕಾರವಾರ: ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಒಟ್ಟು 18.95 ಕೋಟಿ ರೂ. ಹಣವು ಸಕಾಲದಲ್ಲಿ ಖರ್ಚಾಗದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಾಪಸಾದ ಬಗ್ಗೆ ಜಿಪಂ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ಜಿಪಂ ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಶಿವಾನಂದ ಹೆಗಡೆ ಕಡತೋಕ, ಜಿ.ಎನ್.ಹೆಗಡೆ ಮುರೆಗಾರ್, ಉಷಾ ಹೆಗಡೆ, ಅಲ್ಬರ್ಟ್ ಬರ್ನಲ್ ಡಿಕೋಸ್ಟಾ, ಎಂ.ಜಿ.ಹೆಗಡೆ ಗೆಜ್ಜೆ ಸೇರಿ ಹಲವರು, ಅಧಿಕಾರಿಗಳ ನಿರ್ಲಕ್ಷ್ಯಂದ ಅಷ್ಟೊಂದು ಹಣ ವಾಪಸಾಗಿದ್ದು, ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷ ಮಾರ್ಚ್ 31ಕ್ಕೂ ಮುಂಚೆಯೇ ಖಜಾನೆ ಇಲಾಖೆ ಬಿಲ್ ಪಾವತಿ ಬಂದ್ ಮಾಡುತ್ತದೆ ಎಂಬ ಮಾಹಿತಿ ಇದ್ದರೂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಜಿಪಂ ಅಧ್ಯಕ್ಷರೂ ಈ ಕುರಿತು ಯಾವುದೇ ರೀತಿ ಮಾತನಾಡುತ್ತಿಲ್ಲ. ಒಂದಿಬ್ಬರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡಲ್ಲಿ ಮಾತ್ರ ವ್ಯವಸ್ಥೆ ಸರಿ ಹೋಗುತ್ತದೆ ಎಂದರು. ಸಭೆಯ ಕ್ಷಮೆ ಕೇಳಿದ ಜಿಪಂ ಸಿಇಒ ಎಂ.ರೋಶನ್, ‘ನಾವು ಸಾಕಷ್ಟು ಪ್ರಯತ್ನ ಮಾಡಿದ ನಂತರವೂ ಹಣ ವಾಪಸಾಗಿದೆ. ಈ ಸಂಬಂಧ ಇಬ್ಬರು ಇಂಜಿನಿಯರ್ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಮುಕ್ತಾಯವಾದ ಸಿವಿಲ್ ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಮೋಸವಾಗುವುದಿಲ್ಲ. ಈ ವರ್ಷದ ಅನುದಾನದಲ್ಲಿ ಮೊದಲ ಹಳೆಯ ಬಾಕಿ ಪಾವತಿಸಲಾಗುವುದು. ನಂತರ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಬರೆಯಲಾಗುವುದು. ಕರೊನಾ ಲಾಕ್ಡೌನ್ ದುಷ್ಪರಿಣಾಮ ಹಿನ್ನೆಲೆ ಈ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಕಡಿಮೆಯಾಗಬಹುದು’ ಎಂದರು.
ಸಾಲ ತುಂಬುವ ಅವಧಿ ಮುಂದುವರಿಸಿ: ಮೇ 31 ರೊಳಗೆ ರೈತರು ಬೆಳೆ ಸಾಲ ಮರುಪಾವತಿ ಮಾಡದೇ ಇದ್ದಲ್ಲಿ ಶೇ. 5ರಷ್ಟು ಬಡ್ಡಿ ಬೀಳಲಿದೆ. ಇನ್ನು ಜೂನ್ ಅಂತ್ಯದ ಒಳಗೆ ಸಾಲ ಮರುಪಾವತಿ ಮಾಡದೇ ಇದ್ದಲ್ಲಿ ಶೇ. 12ರಷ್ಟು ಬಡ್ಡಿ ಬೀಳಲಿದೆ. ಸಾಕಷ್ಟು ಜನ ಕಟ್ಬಾಕಿದಾರರಾಗುವ ಸಾಧ್ಯತೆ ಇದೆ. ಇದರಿಂದ ಅಂಥವರಿಗೆ ಶೂನ್ಯ ಬಡ್ಡಿ ದರದಲ್ಲಿ ಈ ಸಾಲಿಗೆ ಬೆಳೆ ಸಾಲವೂ ಸಿಗದಂತಾಗುತ್ತದೆ. ಇದರಿಂದ ರೈತರ ಬೆಳೆ ಸಾಲ ತುಂಬುವ ಅವಧಿಯನ್ನು ಒಂದು ವರ್ಷ ಮುಂದುವರಿಸಬೇಕು ಎಂದು ಜಿಪಂನಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಕಳಿಸಬೇಕು ಎಂದು ಶಿವಾನಂದ ಹೆಗಡೆ ಆಗ್ರಹಿಸಿದರು. ಜಿ.ಎನ್.ಹೆಗಡೆ ಅನುಮೋದಿಸಿದರು.
ಉದ್ಯಮಕ್ಕೆ ಶೂನ್ಯ ಬಡ್ಡಿ ಸಾಲ ನೀಡಿ: ರತ್ನಾಕರ ನಾಯ್ಕ ಮಾತನಾಡಿ, ‘ಉದ್ಯಮಕ್ಕೆ ಶೂನ್ಯ ಬಡ್ಡಿ ದರದ ಸಾಲ ನೀಡಬೇಕು. ಎನ್ಆರ್ಇಜಿಎ ಪ್ರತಿ ವ್ಯಕ್ತಿಗೆ ನೀಡುವ ಗರಿಷ್ಠ ಉದ್ಯೋಗದ ದಿನವನ್ನು 200 ದಿನಕ್ಕೆ ವಿಸ್ತರಿಸಬೇಕು ಎಂದು ಜಿಪಂನಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದು ಮನವಿ ಮಾಡಿದರು.
ಅಭಿನಂದನಾ ನಿರ್ಣಯ: ಕರೊನಾ ಹಾಗೂ ಲಾಕ್ಡೌನ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ, ಇನ್ನೂ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಡಳಿತ, ಎಲ್ಲ ಅಧಿಕಾರಿಗಳು ಹಾಗೂ ಕರೊನಾ ಸೇನಾನಿಗಳಿಗೆ ಜಿಪಂನಲ್ಲಿ ಅಭಿನಂದನಾ ನಿರ್ಣಯ ಮಂಡಿಸಲಾಯಿತು. ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಚೈತ್ರಾ ಕೊಠಾರಕರ್ ವೇದಿಕೆಯಲ್ಲಿ ಇದ್ದರು.
1036 ಕೋಟಿ ರೂಪಾಯಿ ಬಜೆಟ್ಗೆ ಅನುಮೋದನೆ: ಸರ್ಕಾರ ಒಪ್ಪಿಗೆ ನೀಡಿದ ಜಿಪಂನ 1036.41 ಕೋಟಿ ರೂ.ಗಳ ಬಜೆಟ್ ಅನ್ನು ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಬಜೆಟ್ನಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳಿಗೆ 314 ಕೋಟಿ ರೂ.ಗಳನ್ನು ನೀಡಲಾಗಿದ್ದು, ಇದು ಕಳೆದ ಸಾಲಿಗಿಂತ 17 ಕೋಟಿ ರೂಪಾಯಿ ಹೆಚ್ಚುವರಿಯಾಗಿದೆ. ತಾಪಂ ಕಾರ್ಯಕ್ರಮಗಳಿಗೆ 720 ಕೋಟಿ ರೂ. ಮೀಸಲಿಡಲಾಗಿದ್ದು, ಇದು ಕಳೆದ ಸಾಲಿಗಿಂತ 64.75 ಕೋಟಿ ರೂ. ಹೆಚ್ಚುವರಿಯಾಗಿದೆ. ಜಿಪಂ ಹಾಗೂ ಅಧೀನ ಇಲಾಖೆಗಳ ನೌಕರರ ವೇತನಕ್ಕೆ 101 ಕೋಟಿ ರೂ., ಹೊರಗುತ್ತಿಗೆ ಸಿಬ್ಬಂದಿ ವೆಚ್ಚಕ್ಕೆ 8.08 ಕೋಟಿ ರೂ., ದಿನಗೂಲಿ ನೌಕರರ ವೇತನಕ್ಕೆ 77 ಲಕ್ಷ ರೂ., ಅಭಿವೃದ್ಧಿ ಕಾರ್ಯಗಳಿಗೆ 205 ಕೋಟಿ ರೂ. ನಿಗದಿ ಮಾಡಲಾಗಿದೆ. ತಾಲೂಕು ಪಂಚಾಯಿತಿ ಮತ್ತು ಅಧೀನ ಇಲಾಖೆಗಳ ನೌಕರರ ವೇತನಕ್ಕೆ 596 ಕೋಟಿ ರೂ. ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕೆ 1.42 ಕೋಟಿ, ಅಭಿವೃದ್ಧಿ ಕಾರ್ಯಗಳಿಗೆ 128 ಕೋಟಿ ರೂ. ನೀಡಲಾಗಿದೆ. ಮುಖ್ಯವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 692 ಕೋಟಿ ರೂ., ವೈದ್ಯಕೀಯ ಮತ್ತು ಜನಾರೋಗ್ಯಕ್ಕೆ 51 ಕೋಟಿ ರೂ., ಕುಟುಂಬ ಕಲ್ಯಾಣಕ್ಕೆ 25.55 ಕೋಟಿ ರೂ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 36.81 ಕೋಟಿ ರೂ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 63, ಪೌಷ್ಟಿಕ ಆಹಾರಕ್ಕೆ 46 ಕೋಟಿ ರೂ.ಗಳನ್ನು ನೀಡಲಾಗಿದೆ.
ಗೋಕರ್ಣದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ: 15ನೇ ಹಣಕಾಸು ಯೋಜನೆಯಲ್ಲಿ ಜನಸಂಖ್ಯೆ ಆಧಾರದ ಮೇಲೆ 4 ಕೋಟಿ 93 ಲಕ್ಷ ರೂ. ಅನುದಾನ ಜಿಲ್ಲೆಗೆ ಮಂಜೂರಾಗಿದೆ. ಇದರಲ್ಲಿ ಶೇ. 25 ರಷ್ಟು ಅನುದಾನವನ್ನು ಸ್ವಚ್ಛ ಭಾರತ ಮಿಷನ್ ಯೋಜನೆಗಾಗಿ ಬಳಸಬೇಕು. ಗೋಕರ್ಣದಲ್ಲಿ ಸಿಡಿಪಿ ಎಂಬ ಸಂಸ್ಥೆಯಿಂದ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕೆ ಯೋಜಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಒಂದು ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ನಿರ್ವಹಣಾ ಘಟಕ ಮಾಡಬೇಕಿದೆ. ಮೊದಲ ಹಂತದಲ್ಲಿ ಭಟ್ಕಳವನ್ನು ಆಯ್ದುಕೊಂಡು ಅಲ್ಲಿ ಬಾಟಲಿ, ಬಟ್ಟೆ, ಶೂಗಳ ಮರುಬಳಕೆ ಘಟಕ, ನ್ಯಾಪ್ಕಿನ್ ಸುಡುವ ಯಂತ್ರ ಅಳವಡಿ ಸಲಾಗುವುದು ಎಂದು ಸಿಇಒ ಎಂ.ರೋಶನ್ ಮಾಹಿತಿ ನೀಡಿದರು.