ಜಿಪಂ ವ್ಯಾಪ್ತಿ ಕೆರೆ ಅಭಿವೃದ್ಧಿಗೆ ನೀಡಿ ಆದ್ಯತೆ

CTD 12 KERE BALAKEDARA SANGA (2)---0001
Published on

ಚಿತ್ರದುರ್ಗ: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ಕೆರೆಗಳ ಅಭಿವೃದ್ಧಿಗೆಂದು ರೂಪಿಸಿರುವ ಸಾಂಸ್ಥಿಕ ಯೋಜನೆ ಮಾದರಿಯನ್ನು ರಾಜ್ಯದ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯ ಅಂದಾಜು 30 ಸಾವಿರ ಕೆರೆಗಳ ಅಭಿವೃದ್ಧಿಗೂ ಅಳವಡಿಸುವಂತೆ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟ ಒತ್ತಾಯಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಮುಖಂಡರು, ಈ ಸಂಬಂಧ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಅವರನ್ನು ಈಚೆಗೆ ಬೆಂಗಳೂರಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಾಂಸ್ಥಿಕ ಮಾದರಿ ಯೋಜನೆಯಡಿ ಗ್ರಾಮ ಮಟ್ಟದ ಕೆರೆ ಬಳಕೆದಾರರ ಸಂಘ ಹಾಗೂ ಗ್ರಾಪಂ ಉಪ ಸಮಿತಿಯಿಂದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ, ರಾಜ್ಯದ 3239 ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಚೆಗೆ ಹೊರಡಿಸಿರುವ ಆದೇಶವನ್ನು ಒಕ್ಕೂಟ ಸ್ವಾಗತಿಸಿತು.
ಸಣ್ಣ ನೀರಾವರಿ ಇಲಾಖೆಯಡಿ ಜಲಸಂವರ್ಧನಾ ಸಂಘ ಸ್ಥಾಪಿಸಿ, ಅದರಡಿ ರಾಜ್ಯದ ಅಂದಾಜು 3710 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿತ್ತು. ಈ ಕಾರ‌್ಯಕ್ಕಾಗಿ ರಾಜ್ಯ ಸರ್ಕಾರ 3200 ಕೆರೆ ಬಳಕೆದಾರರ ಸಂಘಗಳನ್ನು ಸ್ಥಾಪಿಸಿತ್ತು. 2112ರಲ್ಲಿ ಈ ಯೋಜನೆ ಮುಕ್ತಾಯ ಬಳಿಕ ಸರ್ಕಾರದ ನಿರ್ಲಿಪ್ತ ಧೋರಣೆಯಿಂದಾಗಿ ಅನೇಕ ಸಂಘಗಳು ನಿಷ್ಕ್ರಿಯಗೊಂಡಿದ್ದು, ಸಮುದಾಯ ಸಹಭಾಗಿತ್ವದಲ್ಲಿ ಕೆರೆಗಳ ಅಭಿವೃದ್ಧಿ ಯೋಜನೆ ಮುಂದುವರಿಸುವಂತೆ ಸರ್ಕಾರವನ್ನು ಒಕ್ಕೂಟ ನಿರಂತರವಾಗಿ ಒತ್ತಾಯಿಸುತ್ತಾ ಬಂದಿತ್ತು ಎಂದರು.
ಸಚಿವರು ಒಕ್ಕೂಟದ ಆಗ್ರಹಕ್ಕೆ ಸ್ಪಂದಿಸಿದ್ದು, ಸಮುದಾಯದ ಸಹಭಾಗಿತ್ವದೊಂದಿಗೆ ಕೆರೆಗಳ ಅಭಿವೃದ್ಧಿಗೆ ಆದೇಶಿಸಿದ್ದಾರೆ. ಆದರೆ, ಈ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೀಮಿತಗೊಂಡಿದ್ದು, ಜಿಪಂ ಕೆರೆಗಳಿಗೂ ಈ ಆದೇಶವನ್ನು ಅನ್ವಯಿಸುವಂತೆ ಒತ್ತಾಯಿಸಿದರು.
ಒಕ್ಕೂಟದ ನಿಯೋಗಕ್ಕೆ ಈಗಾಗಲೇ ಭರವಸೆ ನೀಡಿರುವ ಸಚಿವರು, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಕೂಡಲೇ ಈ ವಿಚಾರವನ್ನು ತಂದು ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸಭೆ ಒತ್ತಾಯಿಸಿತು.
ಒಕ್ಕೂಟದ ಅಧ್ಯಕ್ಷ ಬಿ.ನಾಗರಾಜಯ್ಯ, ಉಪಾಧ್ಯಕ್ಷ ಬಿ.ಎಸ್.ಅಯ್ಯಣ್ಣ, ಕಾರ‌್ಯದರ್ಶಿ ಸಿ.ಆರ್.ನಾಗರಾಜ್, ಖಜಾಂಜಿ ಜಿ.ಬೋಜರಾಜು, ಟಿ.ರಾಮಚಂದ್ರ, ಆರ್.ಕೃಷ್ಣಪ್ಪ, ಜಿ.ಎಂ.ನಾಗೇಂದ್ರಪ್ಪ, ಬಿ.ಎಲ್.ನಾಗರಾಜ್, ಲಕ್ಷ್ಮೀಸಾಗರದ ಕುಮಾರ್, ಪಿ.ಬಿ.ಸಿದ್ದಪ್ಪ, ಎಚ್.ಟಿ.ಚಂದ್ರಪ್ಪ ಮತ್ತಿತರರು ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net