ಜಿಪಂ ನಾಲ್ವರ ಸದಸ್ಯತ್ವಕ್ಕೆ ಕುತ್ತು?

9 Dwd 10 (Dharwad ZP)
Published on

ಧಾರವಾಡ: ಜಿಲ್ಲಾ ಪಂಚಾಯಿತಿಯ ನಾಲ್ವರ ಮೇಲೆ ಸದಸ್ಯತ್ವ ರದ್ದಾಗುವ ತೂಗುಗತ್ತಿ ನೇತಾಡುತ್ತಿದೆ. ಬಿಜೆಪಿ ವಿಧಿಸಿದ್ದ ವಿಪ್ ಉಲ್ಲಂಘಿಸಿದ ಪ್ರಕರಣದ ವಿಚಾರಣೆಯನ್ನು ರಾಜ್ಯ ಚುನಾವಣೆ ಆಯೋಗ ಪೂರ್ಣಗೊಳಿಸಿದೆ ಎನ್ನಲಾಗಿದ್ದು, ಅಂತಿಮ ಆದೇಶ ಬಾಕಿ ಇದೆ.

ಜಿಲ್ಲೆಯ ತಬಕದಹೊನ್ನಳ್ಳಿ ಕ್ಷೇತ್ರದ ಮಂಜವ್ವ ಹರಿಜನ, ಗರಗ ಕ್ಷೇತ್ರದ ರತ್ನಾ ಪಾಟೀಲ, ಗಳಗಿ ಕ್ಷೇತ್ರದ ಅಣ್ಣಪ್ಪ ದೇಸಾಯಿ ಹಾಗೂ ಗುಡಗೇರಿ ಕ್ಷೇತ್ರದ ಜ್ಯೋತಿ ಬೆಂತೂರ ಸದಸ್ಯತ್ವ ರದ್ದಾಗುತ್ತದೆಯೇ ಎಂಬ ಜಿಜ್ಞಾಸೆ ಮೂಡಿಸಿದೆ.

ಬಿಜೆಪಿಯ ಚೈತ್ರಾ ಶಿರೂರ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2019ರ ಫೆಬ್ರವರಿಯಲ್ಲಿ ರಾಜಕೀಯದಾಟ ನಡೆದಿತ್ತು. ಚೈತ್ರಾ ಅವರ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಬಿಜೆಪಿಯಿಂದ ಆಯ್ಕೆಯಾಗಿದ್ದ ನಾಲ್ವರು ಸದಸ್ಯರು ಬೆಂಬಲಿಸಿದ್ದರು. ಬಿಜೆಪಿಯ ಸದಸ್ಯತ್ವ ಬಲ ಕುಸಿದು ಚೈತ್ರಾ ಶಿರೂರ ಅಧ್ಯಕ್ಷ ಕುರ್ಚಿಯಿಂದ ಕೆಳಗಿಳಿದಿದ್ದರು. ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿತ್ತು. ಪಕ್ಷದಿಂದ ಆಯ್ಕೆಯಾದ ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಅಧಿಕಾರ ಕಳೆದುಕೊಂಡ ಬಿಜೆಪಿ, ಅಂದಿನಿಂದ ಕಾನೂನು ಹೋರಾಟ ನಡೆಸುತ್ತಿದೆ. ನಾಲ್ವರು ಸದಸ್ಯರು ಪಕ್ಷ ವಿಧಿಸಿದ್ದ ವಿಪ್ ಉಲ್ಲಂಘಿಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಈರಣ್ಣ ಜಡಿ ಅವರು ರಾಜ್ಯ ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ಆಯೋಗವು ಎರಡೂ ಕಡೆಯ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ಶೀಘ್ರವೇ ಅಂತಿಮ ತೀರ್ಪು ಹೊರಬೀಳಲಿದೆ. ಪಕ್ಷದ ಚಿಹ್ನೆಯಡಿ ಜಯ ಗಳಿಸಿ, ದ್ರೋಹ ಬಗೆದು ಕಾಂಗ್ರೆಸ್ ಬೆಂಬಲಿಸಿದ ನಾಲ್ವರಿಗೆ ಆಯೋಗದ ತೀರ್ಪು ಪಾಠವಾಗಬೇಕು ಎಂದು ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ ಪ್ರತಿಕ್ರಿಯಿಸಿದ್ದಾರೆ.

ಜಿ.ಪಂ. ಸದ್ಯದ ಬಲಾಬಲ: 2019ರ ಫೆಬ್ರವರಿಯಲ್ಲಿ ನಡೆದ ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 10 ಹಾಗೂ ಶಿವಾನಂದ ಕರಿಗಾರ ಸ್ವತಂತ್ರವಾಗಿ ಆಯ್ಕೆಯಾಗಿದ್ದರು. ಸದಸ್ಯ ಯೋಗೀಶಗೌಡ ನಿಧನದ ನಂತರ ಹೆಬ್ಬಳ್ಳಿ ಕ್ಷೇತ್ರದಿಂದ ಚನ್ನಬಸಪ್ಪ ಮಟ್ಟಿ ಆಯ್ಕೆಯಾಗಿದ್ದರು. ನಂತರ ಶಿವಾನಂದ ಕರಿಗಾರ ಸಹ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಕೈ ಬಲ 12ಕ್ಕೆ ಏರಿದೆ. ಬಿಜೆಪಿಯ 10 ಸದಸ್ಯರಲ್ಲಿ ನಾಲ್ವರು ಕಾಂಗ್ರೆಸ್ ಬೆಂಬಲಿಸಿರುವುದರಿಂದ ಬಿಜೆಪಿಯ ಸಂಖ್ಯಾಬಲ 6ಕ್ಕೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net