ಜಿಪಂ ಉಪಾಧ್ಯಕ್ಷೆಯಾಗಿ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಅವಿರೋಧ ಆಯ್ಕೆ

2CBP3ZP
Published on

ಚಿಕ್ಕಬಳ್ಳಾಪುರ: ನಿರೀಕ್ಷೆಯಂತೆ ಜಿ.ಪಂ.ಉಪಾಧ್ಯಕ್ಷರಾಗಿ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ (ತೊಂಡೇಬಾವಿ ಜಿಪಂ ಕ್ಷೇತ್ರ) ಬುಧವಾರ ಅವಿರೋಧ ಆಯ್ಕೆಯಾಗಿದ್ದಾರೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಇದರಲ್ಲಿ ಸರಸ್ವತಮ್ಮ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

28 ಸ್ಥಾನ ಹೊಂದಿರುವ ಜಿಪಂನಲ್ಲಿ 21 ಕಾಂಗ್ರೆಸ್, ಜೆಡಿಎಸ್ 5, ಸಿಪಿಎಂ ಮತ್ತು ಬಿಜೆಪಿ ತಲಾ 1 ಸ್ಥಾನ ಹೊಂದಿದೆ. ಕೈ ಸ್ಪಷ್ಟ ಬಹುಮಥ ಹೊಂದಿದ್ದರೂ ಸ್ವಪಕ್ಷೀಯ ಜಿ.ಪಂ.ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಅವರನ್ನು ಕೆಳಗಿಳಿಸಲು ಕಸರತ್ತು ನಡೆಸಿದ್ದು ಹಲವು ಬಾರಿ ತಾಂತ್ರಿಕ ಕಾರಣಗಳಿಂದ ಮೂರು ಬಾರಿ ಅವಿಶ್ವಾಸ ನಿರ್ಣಯ ಸಭೆ ಮುಂದೂಡಿಕೆಯಾಗಿತ್ತು. ಕೊನೆಗೆ ನಾಲ್ಕನೇ ಬಾರಿಗೆ ಯಶಸ್ವಿಯಾಗಿದ್ದರು. ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಇದರಲ್ಲಿ 28 ಸದಸ್ಯರ ಪೈಕಿ 24 ಮಂದಿ ಸದಸ್ಯರು ಭಾಗವಹಿಸಿದ್ದು ಈಗಾಗಲೇ ಪಕ್ಷದ ವರಿಷ್ಠರು ಮತ್ತು ಸದಸ್ಯರ ವಿರುದ್ಧ ಮುನಿಸಿಕೊಂಡಿದ್ದ ನಿರ್ಮಲಾ ಸೇರಿ ನಾಲ್ವರು ಸದಸ್ಯರು ಗೈರಾಗಿದ್ದರು. ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಸದಸ್ಯರು ನೂತನ ಉಪಾಧ್ಯಕ್ಷರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಪ್ರತಿಯೊಬ್ಬರ ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಜನರಿಗೆ ಕುಡಿಯುವ ನೀರು, ರಸ್ತೆ ಸಮಸ್ಯೆ ಸೇರಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಜಿ.ಪಂ.ಉಪಾಧ್ಯಕ್ಷೆ ಸರಸ್ವತಮ್ಮ ತಿಳಿಸಿದರು. ಜಿ.ಪಂ.ಮಾಜಿ ಅಧ್ಯಕ್ಷರಾದ ಪಿ.ಎನ್.ಕೇಶವರೆಡ್ಡಿ, ಎಚ್.ವಿ.ಮಂಜುನಾಥ್, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ಮತ್ತಿತರರು ಇದ್ದರು.

ಪಕ್ಷದ ವರಿಷ್ಠರು ಮತ್ತು ಜಿಪಂ ಸದಸ್ಯರ ಸಹಕಾರದಿಂದ ಅವಿರೋಧ ಆಯ್ಕೆ ಸಾಧ್ಯವಾಯಿತು. ಉಪಾಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತಸ ಮೂಡಿಸಿದೆ. ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ಜಿ.ಪಂ.ನೂತನ ಉಪಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net