

ಮೈಸೂರು: ಲೈಂಗಿಕ ಶೋಷಣೆ, ಭ್ರಷ್ಟಾಚಾರ ಆರೋಪದಡಿ ಮೈಸೂರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಕೃಷ್ಣರಾಜು ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ.
ಈ ಆರೋಪದಡಿ ನೊಂದವರು ನೀಡಿರುವ ದೂರು ಸ್ವಿಕೃತವಾಗಿದೆ. ಲೈಂಗಿಕ ಶೋಷಣೆಗೆ ಸಂಬಂಧಿಸಿದಂತೆ ಜಿಪಂ ಆಂತರಿಕ ದೂರು ಸಮಿತಿಯಿಂದ ವಿಚಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಉಳಿದ ಆರೋಪಗಳಿಗೆ ನಿಯಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ಗಾಯತ್ರಿ ಅವರಿಗೆ ಸೂಚನೆ ನೀಡಿದ್ದಾರೆ.
ಕೃಷ್ಣರಾಜು ಅವರು ಈ ಹಿಂದೆ ಎಚ್.ಡಿ.ಕೋಟೆ, ನಂಜನಗೂಡು, ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಸಾಕಷ್ಟು ಹಣ ಮಾಡಿದ್ದಾರೆ. ಜತೆಗೆ, ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಕಾಟ ತಾಳಲಾರದೆ ಹೊರಗುತ್ತಿಗೆ ಮಹಿಳಾ ಸಿಬ್ಬಂದಿ ಕೆಲಸ ಬಿಟ್ಟಿದ್ದಾರೆ ಎಂದು ನೊಂದ ನೌಕರರು ದೂರಿದ್ದರು.
ಮೈಸೂರು ಜಿಪಂನಲ್ಲಿ ಉಪಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ ದುಡ್ಡು ಮಾಡಿದ್ದಾರೆ. ಹೆಂಡತಿಯ ತಮ್ಮನ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದಾರೆ. ನರೇಗಾ ಯೋಜನೆಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಈ ಕುರಿತು ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಈ ಕುರಿತು ಸಿಎಂ, ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತರಿಗೆ ನೊಂದ ನೌಕರರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.