

ಕಲಬುರಗಿ: ಅಭಿವೃದ್ಧಿ ಕೆಲಸಗಳಿಗಾಗಿ 2019-20ರಲ್ಲಿ ಲಿಂಕ್ ಡಾಕುಮೆಂಟ್ ಪ್ರಕಾರ ಹಂಚಿಕೆಯಾಗಿದ್ದ 9.81 ಕೋಟಿ ರೂ. ಮತ್ತು ತಾಲೂಕು ಪಂಚಾಯಿತಿಗಳ ಅನುದಾನ ಲ್ಯಾಪ್ಸ್ ಆಗಿರುವುದು ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ 18ನೇ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿ ಗರ್ಮಾ ಗರಂ ಚರ್ಚೆಗೆ ಕಾರಣವಾಯಿತು. ಹಣ ಬಳಸಿಕೊಳ್ಳುವಲ್ಲಿ ವಿಫಲಗೊಂಡಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಭೆ ನಿರ್ಧರಿಸಿತು.
ಈ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಶಿವಾನಂದ ಪಾಟೀಲ್, ನಮ್ಮ ಭಾಗಕ್ಕೆ ಅನುದಾನ ಬರುವುದೇ ಕಷ್ಟ. ಬಂದಿರುವ ಅನುದಾನವೂ ಲ್ಯಾಪ್ಸ್ ಆಗುತ್ತದೆ ಎಂದರೆ ಏನರ್ಥ ಎಂದು ಪ್ರಶ್ನಿಸಿ ಲ್ಯಾಪ್ಸ್ ಆಗಿರುವ ಅನುದಾನ ಮರಳಿ ಪಡೆಯಲು ಸರ್ಕಾರದ ಬಳಿ ನಿಯೋಗ ಕೊಂಡೊಯ್ಯುವಂತೆ ಸಲಹೆ ನೀಡಿದರು. ಇವರ ಮಾತಿಗೆ ಗೌತಮ ಪಾಟೀಲ್, ಸಿದ್ದರಾಮ ಪ್ಯಾಟಿ, ರೇವಣಸಿದ್ದಪ್ಪ ಸಂಕಾಲಿ, ದಂಡಪ್ಪ ಸಾಹು, ಹರ್ಷಾನಂದ ಗುತ್ತೇದಾರ್, ಶರಣಬಸಪ್ಪ ಪಾಟೀಲ್ ಇತರರು ಪಕ್ಷಭೇದ ಮರೆತು ಧ್ವನಿಗೂಡಿಸಿದರು. ಯಾರ ತಪ್ಪಿನಿಂದ ಹಣ ಲ್ಯಾಪ್ಸ್ ಆಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಂಥವರನ್ನು ಗುರುತಿಸಿ ನೊಟೀಸ್ ನೀಡಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಿಇಒ ಡಾ.ರಾಜಾ ಸಮ್ಮತಿ ಸೂಚಿಸಿದರು.
ಜಿಪಂನಿಂದ ಲೋಪಗಳಾಗಿಲ್ಲ. ಲಿಂಕ್ ಡಾಕುಮೆಂಟ್ನಲ್ಲಿ 8.68 ಕೋಟಿ ರೂ. ಹಾಗೂ ಇತರ ಖಾತೆಯಡಿ 1.18 ಕೋಟಿ ರೂ. ಸೇರಿ 9.81 ಕೋಟಿ ರೂ. ಲ್ಯಾಪ್ಸ್ ಆಗಿದೆ. ಏಳು ತಾಪಂಗಳಲ್ಲಿ ಅನಿರ್ಬಂಧಿತ ಅನುದಾನದಡಿ 7.64 ಕೋಟಿ ರೂ. ಲ್ಯಾಪ್ಸ್ ಆಗಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ರಾಮಣ್ಣ ಅಥಣಿ ವಿವರಿಸಿದರು.
ಅಧ್ಯಕ್ಷೆ ಸುವರ್ಣ ಮಲಾಜಿ ಅಧ್ಯಕ್ಷತೆಯ ಸಭೆಯಲ್ಲಿ ಉಪಾಧ್ಯಕ್ಷೆ ಶೋಭಾ ಸಿರಸಗಿ, ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಸಹಾಯಕ ಕಾರ್ಯದರ್ಶಿ ಮಹಾದೇವ ಬಂಬೂಳಗಿ ಇತರರಿದ್ದರು.
ಪಶು ಸಂಗೋಪನಾ ಹಣ ದುರ್ಬಳಕೆ ತನಿಖೆ: ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವ್ಯವಸ್ಥಾಪಕರ ಕಾರ್ಯವೈಖರಿಗೆ ಪ್ರತಿಪಕ್ಷ ನಾಯಕ ಶಿವಾನಂದ ಪಾಟೀಲ್ ಮತ್ತು ಸಿದ್ದರಾಮ ಪ್ಯಾಟಿ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ಡಿಡಿ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿನಾಕಾರಣ ತೊಂದರೆ ನೀಡುತ್ತಿರುವ ದೂರುಗಳಿವೆ. ಸರಿಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದ ಪಾಟೀಲ್, ವಿನಾಕಾರಣ ಯಾರನ್ನೂ ಬೇರೆಡೆ ನಿಯೋಜನೆ ಮಾಡಬೇಡಿ ಎಂದರು. ಜಿಪಂನಿಂದ ಪಶು ಸಂಗೋಪನಾ ಇಲಾಖೆಗೆ ನೀಡಿರುವ 1 ಕೋಟಿ ಅನುದಾನದಲ್ಲಿ ಔಷಧ ಖರೀದಿಯಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಹರ್ಷಾನಂದ ಗುತ್ತೇದಾರ್ ಆರೋಪಿಸಿದರು. ಇದಕ್ಕೆ ಶಿವಾನಂದ ಪಾಟೀಲ್ ಮತ್ತು ಗೌತಮ ಪಾಟೀಲ್ ಧ್ವನಿಗೂಡಿಸಿದರು. ಈ ಕುರಿತು ತನಿಖೆ ನಡೆಸಿ ವರದಿ ಪಡೆದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಡಾ.ರಾಜಾ ಹೇಳಿದರು. ಧಂಗಾಪುರ ಪಶು ಚಿಕಿತ್ಸಾ ಕೇಂದ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿ ನಿಯೋಜಿಸುವಂತೆ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಕೋರಿದರು.
ಸೋಯಾಬೀನ್ ಬೀಜ ಬಿತ್ತನೆ ಮಾಡಬೇಡಿ: ಗುಣಮಟ್ಟದಲ್ಲಿ ಸಮಸ್ಯೆ ಇರುವ ಸೋಯಾಬೀನ್ ಬೀಜ ಖರೀದಿಸಿ ಯಾರೂ ಬಿತ್ತನೆ ಮಾಡಬಾರದು ಎಂದು ರೈತರಿಗೆ ಮನವಿ ಮಾಡಿರುವುದಾಗಿ ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸೂಗೂರ ತಿಳಿಸಿದರು. ಖಾಸಗಿ ಆಗ್ರೋ ಕೇಂದ್ರದವರು ತಮ್ಮಲ್ಲಿರುವ ಸೋಯಾಬೀನ್ ಬೀಜ ಮಾರಬಾರದು. ಈಗಾಗಲೇ ಖರೀದಿಸಿದವರು ಮರಳಿ ರೈತ ಸಂಪರ್ಕ ಕೇಂದ್ರಕ್ಕೆ ನೀಡಿ ಬೇರೆ ಬೀಜ ಪಡೆಯುವಂತೆ ಸೂಚಿಸಿದರು. ಈ ವಿಷಯ ಪ್ರಸ್ತಾಪಿಸಿ ಗಮನ ಸೆಳೆದ ಹರ್ಷಾನಂದ ಗುತ್ತೇದಾರ್ ಜತೆ ಶರಣಗೌಡ ಪಾಟೀಲ್, ಧಂಗಾಪುರ ಧ್ವನಿಗೂಡಿಸಿದರು.