

ತುಮಕೂರು : ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸಭೆ ಅನಿರೀಕ್ಷಿತವಾಗಿ ಮುಂದೂಡಿಕೆಯಾಗಿದ್ದು, ಅಧಿಕಾರ ಉಳಿಸಿಕೊಳ್ಳಲು ಕುದುರೆ ವ್ಯಾಪಾರ ನಡೆಸಲಾಗಿದೆ ಎಂದು ಜಿಪಂ ಸದಸ್ಯರೇ ದೂರಿದರು.
ಜಿಪಂ ಸಭಾಂಗಣದಲ್ಲಿ ಆರ್‌ಡಿಪಿಆರ್ ಇಲಾಖೆ ಪ್ರಾದೇಶಿಕ ಆಯುಕ್ತ ನವೀನ್‌ರಾಜ್‌ಸಿಂಗ್ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಹೊಯ್ಸಳಕಟ್ಟೆ ಬಿಜೆಪಿ ಸದಸ್ಯ ಎಸ್.ಟಿ.ಮಹಾಲಿಂಗಯ್ಯ, ಬುಕ್ಕಾಪಟ್ಟಣದ ಜೆಡಿಎಸ್ ಸದಸ್ಯ ಜೈಪ್ರಕಾಶ್ ಹಾಜರಾಗಿದ್ದರು. ಸಭೆಗೆ ಕೋರಂ ಕೊರತೆಯ ಕಾರಣ ಹೇಳಿ, ಸಭೆಯನ್ನು ಜ.25ಕ್ಕೆ ಮುಂದೂಡಲಾಯಿತು.
ಅಧಿಕಾರಿಗಳು, ಮಾಧ್ಯಮಗಳನ್ನು ಹೊರಗಿಟ್ಟು ಬೆಳಗ್ಗೆ 10ಕ್ಕೆ ಆರಂಭವಾದ ಸಭೆಗೆ ಇಬ್ಬರು ಸದಸ್ಯರು ಹಾಜರಾದರು, 10.30ಕ್ಕೆ ಸಭೆ ಮುಂದೂಡಿದ ನವೀನ್‌ರಾಜ್‌ಸಿಂಗ್ ಹೊರನಡೆದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಸಿಇಒ ಶುಭಾಕಲ್ಯಾಣ್ ಹಾಗೂ ಅಧಿಕಾರಿಗಳು ಹಿಂಬಾಲಿಸಿದರು.
57 ಸದಸ್ಯ ಬಲದ ಜಿಪಂನಲ್ಲಿ ಸಭೆ ನಡೆಯಲು 29 ಸದಸ್ಯರು ಹಾಜರಾಗಬೇಕಿತ್ತು. ಆದರೆ, ಇಬ್ಬರು ಹಾಜರಿದ್ದರು. ಸಭೆ ನಡೆದಿದ್ದರೆ ಅವಿಶ್ವಾಸ ನಿರ್ಣಯ ಗೆಲುವಿಗೆ ಒಟ್ಟು ಸದಸ್ಯರಲ್ಲಿ ಮೂರನೇ ಎರಡನೇ ಭಾಗದ ಮತ ಬೇಕು. ಸಭೆಯೇ ನಡೆಯದಿದ್ದ ಕಾರಣಕ್ಕೆ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆಯೂ ನಡೆಯಲಿಲ್ಲ.
ಪಡಸಾಲೆಯಲ್ಲಿ ಕಾಣಿಸಿದ ಸದಸ್ಯರು: ಜಿಪಂ ಸಭೆಗೆ ಇಬ್ಬರು ಸದಸ್ಯರು ಹಾಜರಾಗಿದ್ದರೆ ಪಡಸಾಲೆಯಲ್ಲಿ ಸದಸ್ಯರಾದ ವೈ.ಎಚ್.ಹುಚ್ಚಯ್ಯ, ರಾಮಚಂದ್ರಯ್ಯ, ಕಲ್ಲೇಶ್, ನರಸಿಂಹಮೂರ್ತಿ ಮತ್ತಿತರ ಸದಸ್ಯರು ಮಹಾಲಿಂಗಪ್ಪ ಜತೆ ಕಾಣಿಸಿಕೊಂಡರು. ಶಾಂತಲಾ, ಜಿ.ಜೆ.ರಾಜಣ್ಣ ಕೂಡ ಅಧ್ಯಕ್ಷೆ ಎಂ.ಲತಾ ಜತೆ ಕಾಣಿಸಿಕೊಂಡು ಬೆಂಬಲ ಸೂಚಿಸಿದರು.
ಹಿಂದೊಮ್ಮೆ ಅಧ್ಯಕ್ಷೆ ವಿರುದ್ಧ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದ ಜಿಪಂ ಉಪಾಧ್ಯಕ್ಷೆ ಬಿಜೆಪಿಯ ಶಾರದಾ ಸೇರಿ ಬಹುತೇಕ ಬಿಜೆಪಿ, ಜೆಡಿಎಸ್ ಸದಸ್ಯರು ಏಕಾಏಕಿ ನಿಷ್ಠೆ ಬದಲಿಸಿರುವುದು ಆಶ್ಚರ್ಯ ಮೂಡಿಸಿತು. ನಾಲ್ಕೂವರೆ ವರ್ಷ ಅಧಿಕಾರ ಪೂರೈಸಿರುವ ಅಧ್ಯಕ್ಷೆ ಲತಾ ಉಳಿದ ಅವಧಿಯಲ್ಲಿಯೂ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು ಜ.25ರಂದು ಸ್ಪಷ್ಟ ಚಿತ್ರಣ ಹೊರಬರಲಿದೆ.
ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ..: ಶಿರಾ ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿಯೇ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ನಾನು ಕಾಂಗ್ರೆಸ್ ಜಿಪಂ ಸದಸ್ಯೆ ಎಂದು ಅಧ್ಯಕ್ಷೆ ಎಂ.ಲತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಜೆಡಿಎಸ್‌ನಿಂದ ಗೆದ್ದಿರುವ ಲತಾ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷಾಂತರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದು ಅಚ್ಚರಿ ಮೂಡಿಸಿತು. ಪಕ್ಷಾಂತರ ನಿಷೇಧ ಕಾಯ್ದೆಯ ಭಯವಿಲ್ಲದೆ ಪಕ್ಷಾಂತರದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಜೆಡಿಎಸ್ ನಡೆ ಕುತೂಹಲ ಮೂಡಿಸಿದೆ.
ದೊಡ್ಡ ಮೊತ್ತದ ಚೆಕ್ ನೀಡಲು ಬಂದಿದ್ರು..!: ಅಧ್ಯಕ್ಷೆ ಎಂ.ಲತಾ ವಿರುದ್ಧ ಭ್ರಷ್ಟಾಚಾರದ ಆರೋಪ ಹಾಗೂ ಅಸಮರ್ಥತೆ ಆರೋಪದ ಮೇಲೆ ಅವಿಶ್ವಾಸಮತ ಮಂಡನೆಗೆ ಮುಂದಾಗಿರುವ ಸದಸ್ಯರನ್ನು ಹಣಕೊಟ್ಟು ಕೊಂಡುಕೊಂಡಿರುವ ಆರೋಪ ಜಿಪಂ ಪಡಸಾಲೆಯಲ್ಲಿಯೇ ಕೇಳಿಬಂತು. ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ ಸುದ್ದಿಗಾರರ ಜತೆ ಮಾತನಾಡಿ, ಅವಿಶ್ವಾಸ ನಿರ್ಣಯದಿಂದ ಹಿಂದೆ ಸರಿಯುವಂತೆ ದೊಡ್ಡಮೊತ್ತದ ಹಣವನ್ನು ಚೆಕ್ ಮೂಲಕ ನೀಡಲು ಬಂದಿದ್ದರು ಎಂಬ ಬಾಂಬ್ ಸಿಡಿಸಿದರು. ಅವಿಶ್ವಾಸ ನಿರ್ಣಯಕ್ಕೆ ಸಹಿಹಾಕಿದ್ದವರೇ ಗೈರಾಗಿದ್ದು ಆಶ್ಚರ್ಯ ಮೂಡಿಸಿತು, ಜಿಪಂ ಸದಸ್ಯರನ್ನು ಆಮಿಷದ ಮೂಲಕ ಸುಮ್ಮನಾಗಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಯೂ ನನ್ನ ಬಳಿ ಇದೆ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು, ಭ್ರಷ್ಟಾಚಾರದ ಹಣದಲ್ಲಿ ಸದಸ್ಯರನ್ನು ಕೊಂಡುಕೊಂಡಿರುವ ಶಂಕೆಗೆ ಉತ್ತರ ಸಿಗಬೇಕು ಎಂದು ಆಗ್ರಹಿಸಿದರು.
ನಾನು ಕಾಂಗ್ರೆಸ್‌ನ ಜಿಪಂ ಸದಸ್ಯೆಯಾಗಿದ್ದು ಅವಿಶ್ವಾಸ ನಿರ್ಣಯ ಗೆಲ್ಲುವುದಿಲ್ಲ, ನನ್ನ ಕಾರ್ಯವೈಖರಿ ಮೆಚ್ಚಿ ಎಲ್ಲ ಪಕ್ಷದ ಸದಸ್ಯರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಜೆಡಿಎಸ್ ಚಿಹ್ನೆಯಲ್ಲಿ ಗೆದ್ದು ಕಾಂಗ್ರೆಸ್ ಸದಸ್ಯೆ ಎಂದು ಹೇಳಿಕೊಳ್ಳಲು ಅಂಜಿಕೆಯಿಲ್ಲ, ಶೀಘ್ರದಲ್ಲಿಯೇ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆಯುತ್ತೇನೆ.
ಎಂ.ಲತಾ ಜಿಪಂ ಅಧ್ಯಕ್ಷೆ
ಆಡಳಿತ ನಡೆಸಲು ಅಸಮರ್ಥವಾಗಿರುವ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ನಿರ್ಣಯ ಗೆಲ್ಲುವ ವಿಶ್ವಾಸವಿದೆ, ಪತ್ರಕ್ಕೆ ಸಹಿಹಾಕಿದ್ದ ಸದಸ್ಯರು ಸಭೆಗೆ ಗೈರಾಗಿರುವುದು ಆಶ್ಚರ್ಯ ಮೂಡಿಸಿದೆ. ನನಗೂ 5 ಲಕ್ಷ ರೂ. ಚೆಕ್ ಮೂಲಕ ಆಮಿಷ ಒಡ್ಡಿದ್ದರು, ನಾನು ತಿರಸ್ಕರಿಸಿದೆ, ಸದಸ್ಯರನ್ನು ಕೊಂಡುಕೊಂಡು ಆಡಳಿತದಲ್ಲಿ ಮುಂದುವರಿಯುವುದು ಯಾವ ನೈತಿಕತೆ?
ಎಸ್.ಟಿ.ಮಹಾಲಿಂಗಯ್ಯ ಬಿಜೆಪಿ ಜಿಪಂ ಸದಸ್ಯ