

ಹುಬ್ಬಳ್ಳಿ: ಇಲ್ಲಿಯ ದಿಗಂಬರ ಜೈನ್ ಬಾಂಧವರು ಭಾದ್ರಪದ ಮಾಸದ ವಿವಿಧ ಪರ್ವಗಳನ್ನು ಸಂಭ್ರಮದಿಂದ ಆಚರಿಸಿದರು.
ಷೋಡಶ ಕಾರಣ ಪರ್ವ, ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ ಹಾಗೂ ಬ್ರಹ್ಮಚರ್ಯ ಈ ದಶಲಕ್ಷಣಗಳನ್ನು ಆರಾಧಿಸುವ ದಶಲಕ್ಷಣ ಪರ್ವ, ನಿದೋಷ ಸಪ್ತಮಿ ವ್ರತ, ಸುಗಂಧ ದಶಮಿ ವ್ರತ ರತ್ನತ್ರಯ ನೋಂಪಿ, ಅನಂತ ನೋಂಪಿ, ಮೊದಲಾಗಿ ಅನೇಕ ವ್ರತಾಚರಣೆಗಳನ್ನು ಶ್ರಾವಕ ಶ್ರಾವಿಕೆಯರು ಶ್ರದ್ಧಾ ಭಕ್ತಿ ಪೂರ್ವಕವಾಗಿ ಆಚರಿಸಿದರು.
ನಗರದ ವಿವಿಧ ಬಸದಿಗಳನ್ನು ಅಲಂಕೃತಗೊಳಿಸಲಾಗಿತ್ತು. ಮಹಾವೀರಗಲ್ಲಿಯ ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಶ್ರೀ ಶಾಂತಿನಾಥ ಬಸದಿ, ಹಳೇಹುಬ್ಬಳ್ಳಿಯ ಶ್ರೀ ಅನಂತನಾಥ ಬಸದಿ, ಶ್ರೀ ಪಾರ್ಶ್ವಾಥ ಬಸದಿ, ಕಂಚಗಾರಗಲ್ಲಿಯ ಶ್ರೀ ಆದಿನಾಥ ಬಸದಿ, ಸ್ಟೇಷನ್ ರಸ್ತೆಯ ಶ್ರೀ ಚಂದ್ರಪ್ರಭ ಬಸದಿ, ಗೋಕುಲ ರಸ್ತೆಯ ಶ್ರೀ ಮಹಾವೀರ ಬಸದಿ, ನವನಗರದ ಶ್ರೀ ಮುನಿಸುವ್ರತ ಬಸದಿಗಳಲ್ಲಿ ಪರ್ವ ಪೂಜಾ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.
ಸಾಧು ಸಂತರ ಪ್ರವಚನ, ಭಜನೆ, ಆರತಿ, ವಿವಿಧ ಸ್ಪರ್ಧೆ ಮುಂತಾದ ಸಾಮೂಹಿಕ ಕಾರ್ಯಕ್ರಮಗಳನ್ನು ವಿವಿಧ ಮಾಧ್ಯಮಗಳ ಮೂಲಕವೇ ಜನ ಆನಂದಿಸಿದರು.
ಚಂದ್ರಪ್ರಭ ಬಸದಿಯಲ್ಲಿ ವಿಶೇಷ ಅಲಂಕಾರ ಸಹಿತ ಭಕ್ತಾಮರ ಪೂಜಾ ವಿಧಾನ ಅಚ್ಚುಕಟ್ಟಾಗಿ ನಡೆದು ಎಲ್ಲರ ಗಮನ ಸೆಳೆಯಿತು.
ಪರ್ವದ ಕೊನೆಯಲ್ಲಿ ಅಂತರ್ಜಾಲ ಮಾಧ್ಯಮದ ಮೂಲಕವೇ ಸಮಾಜ ಬಾಂಧವರ ಪರಸ್ಪರ ಕ್ಷಮಾ ಯಾಚನಾ ಕಾರ್ಯಕ್ರಮ ನಡೆದು ಭಾದ್ರಪದ ಮಾಸದ ಪರ್ವಗಳನ್ನು ವಿಶ್ವಶಾಂತಿಯ ಕಾಮನೆಯೊಂದಿಗೆ ಮಹಾ ಶಾಂತಿಮಂತ್ರ ಪಾಠ, ಕರೊನಾ ಮುಕ್ತಿಯ ಪ್ರಾರ್ಥನೆಯೊಂದಿಗೆ ಸಮಾಪನಗೊಳಿಸಲಾಯಿತು ಎಂದು ಶಾಂತಿನಾಥ ಹೋತಪೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.