ಜಿಡಿಎಸ್ ಶಾಸಕರೊಂದಿಗೆ ಹಾಸನಾಂಬೆ ದರ್ಶನ ಮಾಡಿದ ಎಚ್‌ಡಿಕೆ

ಜಿಡಿಎಸ್ ಶಾಸಕರೊಂದಿಗೆ ಹಾಸನಾಂಬೆ ದರ್ಶನ ಮಾಡಿದ ಎಚ್‌ಡಿಕೆ
Published on

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ಉತ್ಸವಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೂಕು, ನುಗ್ಗಲು ಗದ್ದಲದೊಂದಿಗೆ ದೇವಿಯ ದರ್ಶನ ಪಡೆದರು.

ಮಾಜಿ ಸಿಎಂ ಎಚ್‌ಡಿಕೆ, ಸಚಿವ ಚೆಲುವರಾಯಸ್ವಾಮಿ, ಶಾಸಕ ಅಖಂಡ ಮೂರ್ತಿ ದೇವಿ ದರ್ಶನ ಪಡೆದರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಪಿ. ಸ್ವರೂಪ್, ಎ.ಮಂಜು, ಎಂ.ಟಿ. ಕೃಷ್ಣಪ್ಪ, ರಾಜುಗೌಡ, ಮಾಜಿ ಮುಖ್ಯಮಂತ್ರಿ ಡಿ. ವಿ ಸದಾನಂದ ಗೌಡ ಹಾಗೂ ಶಾಸಕ ಸಿಮೆಂಟ್ ಮಂಜು ಇತರರು ಬುಧವಾರ ಹಾಸನಾಂಬೆಯ ದರ್ಶನ ಪಡೆದರು.

ಬುಧವಾರ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳ ಆಗಮನ ಕಳೆಗಟ್ಟಿತ್ತು. ಪಕ್ಷದ ಎಲ್ಲಾ ಶಾಸಕರೊಂದಿಗೆ ಬುಧವಾರದಂದು ಹಾಸನಂಬೆ ದರ್ಶನ ಮಾಡುವುದರ ಮೂಲಕ ಜೆಡಿಎಸ್ ಶಾಸಕರ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಸಂದೇಶ ರವಾನೆ ಮಾಡಿದರು.

ಹಾಸನಾಂಬೆ ದೇವಿ ದರ್ಶನಕ್ಕೂ ಮಳೆ ಅಡ್ಡಿ:

ಮಳೆ ನಿರೀಕ್ಷೆ ಇಲ್ಲದೆ ಹಾಸನಾಂಬೆ ದರ್ಶನ ಪಡೆಯಲು ಬಂದಿದ್ದ ಭಕ್ತರು ದಿಢೀರನೇ ಬಂದ ಮಳೆಗೆ ಪರದಾಡಿದರು. ಹಾಸನಾಂಬೆ ದೇಗುಲದ ಹೊರಭಾಗದಲ್ಲಿ ಬಿಸಿಲಿಗೆ ಜರ್ಮನ್ ಟೆಂಟ್ ಹಾಕಿದ್ದು, ದೇವಸ್ಥಾನದ ಒಳಗೆ ಯಾವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಹವಾಮಾನ ಇಲಾಖೆಯು ಒಂದು ವಾರ ಮಳೆಯ ಇರುವುದಾಗಿ ಮುನ್ಸೂಚನೆ ನೀಡಿದ್ದರೂ ದೇಗುಲದ ಆವರಣದಲ್ಲಿ ಮಳೆಯಿಂದ ರಕ್ಷಣೆಗೆ ಯಾವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಹೀಗಾಗಿ ಸರದಿಯಲ್ಲಿ ನಿಂತಿದ್ದ ಭಕ್ತರು ದಿಢೀರನೇ ಸುರಿದ ಮಳೆಗೆ ಪರದಾಡಿದರು.

ಮಧ್ಯಾಹ್ನ ಸುಮಾರು 3 ಗಂಟೆಗೆ ಆರಂಭವಾದ ಮಳೆ ಅರ್ಧ ಗಂಟೆ ಧಾರಾಕಾರವಾಗಿ ಸುರಿಯಿತು. ಇದರಿಂದ ದೇವಾಲಯದ ಆವರಣ ಜಲಾವೃತವಾಯಿತು. ರಾಜಗೋಪುರದ ಮುಂಭಾಗದಲ್ಲಿ ನೀರು ನಿಂತಿತು. ಮಳೆಯಲ್ಲಿ ದರ್ಶನ ಪಡೆಯಲು ಭಕ್ತರು ಹರಸಾಹಸ ಪಡಬೇಕಾಯಿತು. ಸರದಿಯಲ್ಲಿ ನಿಂತಿದ್ದ ಸಾವಿರಾರು ಭಕ್ತರು ಮಳೆಯಿಂದ ರಕ್ಷಣೆಗಾಗಿ ಪರದಾಡಿದ್ದಲ್ಲದೆ ದೇವಾಲಯದ ಒಳಗೆ ಓಡಿದರು. ಮಹಿಳೆಯರು, ಮಕ್ಕಳು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಬೇಕಾಯಿತು. ಕೆಲವರು ತಂದಿದ್ದ ಛತ್ರಿಯ ರಕ್ಷಣೆ ಪಡೆದರೆ ಮಹಿಳೆಯರು ತಮ್ಮ ಸೀರೆಯ ಸೆರಗಿಲ್ಲೇ ಮಳೆಯಿಂದ ರಕ್ಷಣೆ ಪಡೆದರು. ಬುಧವಾರ ಬಿರುಗಾಳಿ ಸಮೇತ ಜೋರು ಮಳೆ ಸುರಿದರು ದೇವಿಯ ದರ್ಶನ ಮಾಡಲೇಬೇಕು ಎಂದು ಕಾದು ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಅಚ್ಚರಿ ದರ್ಶನವನ್ನು ತಾಯಿ ಹಾಸನಾಂಬೆ ದೇವಿ ನೀಡಿತು ಎಂದು ಭಕ್ತಿಯಿಂದ ಕೈಮುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net