ಜಿಟಿಡಿ-ಸಾರಾ ಗುಪ್ತ ಮಾತುಕತೆ !

gt-devegowda-1528520062
Published on

ಮೈಸೂರು: ಜಿಲ್ಲೆಯ ಜೆಡಿಎಸ್ ಪಾಳಯದಲ್ಲಿ ಭಾನುವಾರ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಪಕ್ಷದ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಮಾತುಕತೆ ನಡೆಸಿದ್ದಾರೆ.

ಒಂದೇ ಪಕ್ಷದಲ್ಲಿದ್ದು ಪರಸ್ಪರ ಭಿನ್ನಾಭಿಪ್ರಾಯ ಹೊರ ಹಾಕುತ್ತಿದ್ದ ಜಾ.ದಳದ ಈ ಹಿರಿಯ ನಾಯಕರಿಬ್ಬರು ಪರಸ್ಪರ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಕೆಲ ತಿಂಗಳಿಂದ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ಉಭಯ ನಾಯಕರು, ಜಲದರ್ಶಿನಿ ಅಥಿತಿಗೃಹದಲ್ಲಿ ಗುಪ್ತವಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಮೈತ್ರಿ ಸರ್ಕಾರ ಪತನದ ನಂತರ ಇಬ್ಬರೂ ನಾಯಕರು ದೂರವಾಗಿದ್ದರು. ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದರು. ಸಾ.ರಾ.ಮಹೇಶ್ ಜೆಡಿಎಸ್ ವರಿಷ್ಠರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರೆ, ಜಿ.ಟಿ.ದೇವೇಗೌಡ ಮುನಿಸಿಕೊಂಡಿದ್ದಾರೆ. ಇತ್ತೀಚೆಗೆ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಿಂದ ಜಿ.ಟಿ.ದೇವೇಗೌಡ ದೂರ ಉಳಿದಿದ್ದರು. ಇದರಿಂದ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶಗೊಂಡಿದ್ದರು.

ಈ ನಡುವೆ, ಹುಣಸೂರು ತಾಲೂಕು ಗ್ರಾಮ ಪಂಚಾಯಿತಿ ಚುನಾವಣೆಯ ಉಸ್ತುವಾರಿಯನ್ನ್ನು ವರಿಷ್ಠರು ಜಿಟಿಡಿ ಅವರಿಗೆ ವಹಿಸಿದ್ದಾರೆ. ಹಾಗಾಗಿ ಭಾನುವಾರ ನಗರದಲ್ಲಿ ನಡೆದ ಸ್ವಕ್ಷೇತ್ರ ಚಾಮುಂಡೇಶ್ವರಿ ಜೆಡಿಎಸ್ ಕಾರ್ಯಕರ್ತರ ಸಭೆಯಿಂದಲೂ ಜಿಟಿಡಿ ದೂರ ಉಳಿದಿದ್ದರು.

ಜಿಟಿಡಿ ನಮ್ಮ ನಾಯಕರು !

ಜಿಟಿಡಿ ಭೇಟಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ನಮ್ಮ ನಾಯಕರು. ಅವರನ್ನು ಭೇಟಿ ಮಾಡುವುದರಲ್ಲಿ ವಿಶೇಷ ಏನಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಟಿಡಿ ನಮ್ಮ ಪಕ್ಷದಲ್ಲೇ ಇದ್ದಾರೆ. ಮುಂದೆ ನಮ್ಮ ಜತೆ ಬಂದೇ ಬರುತ್ತಾರೆ. ಕೆಲ ದಿನಗಳ ಕಾಲ ಆ್ಯಕ್ಟಿವ್ ಆಗಿರಲಿಲ್ಲ. ಇನ್ನು ಮುಂದೆ ಆ್ಯಕ್ಟಿವ್ ಆಗುತ್ತಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೇಳುತ್ತೇನೆ. ಅವರು ನನಗಿಂತ 25 ವರ್ಷ ದೊಡ್ಡವರು. ನಮ್ಮಂಥವರು ತಪ್ಪು ಮಾಡಿದಾಗ ತಿದ್ದಿ, ಬುದ್ದಿ ಹೇಳುವ ಅಧಿಕಾರ ಅವರಿಗೆ ಇದೆ. ಹಾಗೇನಾದರೂ ನಾನು ತಪ್ಪು ಮಾಡಿದ್ದರೆ ಅದನ್ನು ತಿದ್ದಿಕೊಳ್ಳುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಜಿ.ಟಿ.ದೇವೇಗೌಡರನ್ನು ಭೇಟಿ ಮಾಡುವ ಸಂದರ್ಭ ಬಂದಿಲ್ಲ. ಆ ಘಳಿಗೆ ಬಂದರೆ ಅವರು ಭೇಟಿ ಮಾಡುತ್ತಾರೆ. ಇನ್ನು ಮುಂದೆ ಎಲ್ಲವೂ ಸರಿಯಾಗಲಿದೆ. ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸಾಧನೆ ಮಾಡಲಿದೆ ಎಂದರು.

ಪ್ರತಿಕ್ರಿಯೆ ನೀಡದ ಜಿಟಿಡಿ!

ಸಾ.ರಾ.ಮಹೇಶ್ ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಜಿ.ಟಿ.ದೇವೇಗೌಡ ತೆರಳಿದರು. ಇದು ವೈಯಕ್ತಿಕ ಭೇಟಿ. ಏನೂ ಮಾತನಾಡಲ್ಲ. ಮಾಧ್ಯಮದಲ್ಲಿ ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಆ ರೀತಿ ನಡೆದುಕೊಂಡಿಲ್ಲ ಎಂದು ಹೇಳಿ ಸ್ಥಳದಿಂದ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net