ಜಿಟಿಡಿ ಮುಂದಿನ ದಾರಿ ಯಾವುದಯ್ಯ?

gtdevegowda
Published on

ಮಂಜುನಾಥ ಟಿ.ಭೋವಿ ಮೈಸೂರು
ರಾಜಕೀಯ ಸ್ಥಿತ್ಯಂತರದ ಹೊಯ್ದಟದಲ್ಲಿ ಸಿಲುಕಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಮುಂದಿನ ರಾಜಕೀಯ ನಡೆ ಯಾವುದು?

ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಿದು. ಜೆಡಿಎಸ್ ವರಿಷ್ಠರ ಜತೆ ಮುನಿಸಿಕೊಂಡಿರುವ ಜಿಟಿಡಿ ಮುಂದೇನು ಮಾಡುತ್ತಾರೆ? ಕಾಂಗ್ರೆಸ್ ಮತ್ತು ಬಿಜೆಪಿ ಈ ಪೈಕಿ ಯಾವ ಪಕ್ಷ ಸೇರುತ್ತಾರೆ? ಅಥವಾ ಜೆಡಿಎಸ್‌ನಲ್ಲೇ ಉಳಿದುಕೊಳ್ಳುತ್ತಾರೆಯೇ ಎಂಬ ಚರ್ಚೆ ನಡೆದಿದೆ. ಈ ಚರ್ಚೆ ಒಂದು ವರ್ಷದಿಂದ ಗಿರಕಿ ಹೊಡೆಯುತ್ತಿದ್ದರೂ ಜಿಟಿಡಿ ಮಾತ್ರ ತಮ್ಮ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.

ಜಿಟಿಡಿ ಪಳಗಿದ ರಾಜಕಾರಣಿ. ರಾಜಕೀಯ ಸಂಧ್ಯಾಕಾಲದಲ್ಲಿರುವ ಅವರು ತಮ್ಮ ಭವಿಷ್ಯಕ್ಕಿಂತ ಪುತ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡರ ರಾಜಕೀಯ ಭವಿಷ್ಯದ ಕುರಿತು ತಲೆಕೆಡಿಸಿಕೊಂಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಪುತ್ರನ ರಾಜಕೀಯ ಪ್ರವೇಶಕ್ಕೆ ತಯಾರಿ ನಡೆಸಿದ್ದಾರೆ. ಹೀಗಾಗಿ, ಅಳೆದು, ತೂಗಿ ರಾಜಕೀಯ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಯಾವ ಪಕ್ಷದಲ್ಲಿ ಪುತ್ರನಿಗೆ ಟಿಕೆಟ್ ದೊರೆಯುತ್ತದೆ ಎಂಬುದು ಖಚಿತವಾದ ಬಳಿಕ ಅವರ ಮುಂದಿನ ನಡೆ ಗೊತ್ತಾಗಲಿದೆ. ಸದ್ಯಕ್ಕೆ ಕಾಯ್ದು ನೋಡುವ ತಂತ್ರಕ್ಕೆ ಶರಣಾಗುವ ಸಾಧ್ಯತೆ ಹೆಚ್ಚು.

ಜಿಟಿಡಿ ನಡೆಯಲ್ಲಿ ಆತುರ ಇಲ್ಲ:
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ಪಕ್ಷದಲ್ಲಿ ನಡೆದ ಅಹಿತಕರ ಘಟನೆಗಳಿಂದ ಜಿಟಿಡಿ ಜೆಡಿಎಸ್‌ನಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ದೂರ ಸರಿದರು. ಜೆಡಿಎಸ್‌ನ ಸಭೆ-ಸಮಾರಂಭ, ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡರು. ಈ ನಿರ್ವಾತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರೊಂದಿಗೆ ಅತಿ ಹೆಚ್ಚು ಎನಿಸುವಷ್ಟು ‘ದೋಸ್ತಿ’ ಬೆಳೆಸಿಕೊಂಡರು. ಬಿಜೆಪಿ ಸರ್ಕಾರದಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಗತ್ಯ ಅನುದಾನ, ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಂಡರು. ಇತ್ತ ರಾಜಕೀಯ ಎದುರಾಳಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಹಳಸಿದ ಸಂಬಂಧವನ್ನು ಸರಿಪಡಿಸಿ ವಿಶ್ವಾಸ ಗಳಿಸಿಕೊಂಡರು. ಇದರ ಫಲವಾಗಿ ಸ್ಥಳೀಯ ಸಂಸ್ಥೆ ಮತ್ತು ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಆಂತರಿಕವಾಗಿ ‘ಕೈ’ ಬಲಪಡಿಸುವ ಕೆಲಸವನ್ನೂ ಮಾಡಿ ಇನ್ನಷ್ಟು ಹತ್ತಿರವಾದರು. ಜೆಡಿಎಸ್‌ನಿಂದ ದೂರವಾಗಿ ಕೈ ಮತ್ತು ಕಮಲ ಪಡೆಯೊಂದಿಗೆ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿಕೊಂಡರು. ಆದರೆ, ಈ ಉಭಯ ಪಕ್ಷಗಳ ಪೈಕಿ ಯಾವುದೇ ಕಡೆಗೂ ವಾಲುವುದಕ್ಕೆ ಆತುರ ಮಾಡುತ್ತಿಲ್ಲ. ಹೀಗಾಗಿ, ಅವರ ಮುಂದಿನ ನಿರ್ಧಾರ ಕುತೂಹಲ ಮೂಡಿಸಿದೆ.


ಬಿಜೆಪಿಗೆ ಹೋಗುವ ಸಾಧ್ಯತೆ ಕಡಿಮೆ:

ಮುಂದಿನ ನವೆಂಬರ್ ಹೊತ್ತಿಗೆ 73ನೇ ವರ್ಷಕ್ಕೆ ಕಾಲಿಡುವ ಜಿಟಿಡಿ, ಬಿಜೆಪಿ ಕಡೆಗೆ ಹೋಗುವ ಸಾಧ್ಯತೆ ತೀರ ಕಡಿಮೆ. ಈ ಹಿಂದೆಯೂ ಒಮ್ಮೆ ಕಮಲ ಪಕ್ಷಕ್ಕೆ ಹೋಗಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದರು. ನಂತರ ಅವರಿಗೆ ಅಂತಹ ದೊಡ್ಡ ಮಟ್ಟದ ಅಧಿಕಾರವೇನೂ ದೊರೆಯಲಿಲ್ಲ. ಅಲ್ಲಿಗೆ ಹೋದರೂ ವಯಸ್ಸಿನ ಕಾರಣಕ್ಕೆ ಭವಿಷ್ಯವಿಲ್ಲ. ಕುಟುಂಬ ರಾಜಕಾರಣ ವಿರೋಧಿಸುವ ಬಿಜೆಪಿ, ಪುತ್ರನಿಗೆ ಹುಣಸೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಲ್ಲ. ಮಿಗಿಲಾಗಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ವಜಾತಿ ಒಕ್ಕಲಿಗರ ಮತಗಳು ಬರಲ್ಲ ಎಂಬ ಕಾರಣಗಳಿಂದ ಬಿಜೆಪಿಗೆ ಹೋಗಲು ಮನಸ್ಸು ಮಾಡುತ್ತಿಲ್ಲ ಎನ್ನಲಾಗುತ್ತಿದೆ.


ಕೈ ಮೊದಲ ಆಯ್ಕೆ:

ಜೆಡಿಎಸ್ ಬಿಡುವುದಾದರೆ ಜಿಟಿಡಿ ಅವರ ಮುಂದಿರುವ ಮೊದಲ ಆಯ್ಕೆ ಕಾಂಗ್ರೆಸ್. ಆದರೆ, ಅಲ್ಲಿಯೂ ಮುಳ್ಳಿನ ಹಾದಿಯನ್ನೇ ಸವೆಸಬೇಕು. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಆ ಪಕ್ಷದ ಕಾರ್ಯಕರ್ತರು, ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆ ಪಕ್ಷಕ್ಕೆ ಹೋದರೆ ಅವರೊಂದಿಗೆ ಕೆಲಸ ಮಾಡಬೇಕಾದ ಅನಿವಾರ್ಯ ಎದುರಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮೇಲ್ನೋಟಕ್ಕೆ ಚೆನ್ನಾಗಿದ್ದುಕೊಂಡು ಅದೇ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸೋಲಿಸಿಬಿಟ್ಟರೆ? ಎಂಬ ಅಳುಕು ಜಿಟಿಡಿಗೆ ಇದ್ದೇ ಇದೆ. ಅಷ್ಟಕ್ಕೂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವಂತೆ ಇನ್ನೂ ಆಹ್ವಾನಿಸಿಲ್ಲ. ಹೀಗಾಗಿ, ಕಾಂಗ್ರೆಸ್ ಕಡೆಗೆ ಹೋಗಬೇಕೋ, ಬೇಡವೋ ಎಂಬ ಆಲೋಚನೆಯಲ್ಲಿದ್ದಾರೆ.


ಜೆಡಿಎಸ್‌ನಲ್ಲೇ ಮುಂದುವರಿಕೆ?:

ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಜಿಟಿಡಿ ಜೆಡಿಎಸ್‌ನಲ್ಲೇ ಉಳಿಯುವ ಸಾಧ್ಯತೆ ಹೆಚ್ಚು. ಎಚ್.ಡಿ. ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ಸಂಧಾನ ಮಾತುಕತೆಗೆ ವೇದಿಕೆ ಹದವಾಗುತ್ತಿದೆ. ಇಬ್ಬರು ಪರಸ್ಪರ ಮೃದುಧೋರಣೆ ತಾಳುವ ಮೂಲಕ ಯುದ್ಧ ವಿರಾಮಕ್ಕೆ ಬಂದಿದ್ದಾರೆ. ಇದರ ಫಲವಾಗಿ ಎಚ್‌ಡಿಕೆ ಅವರನ್ನು ಜಿಟಿಡಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಇದಕ್ಕೆ ಶಾಸಕ ಸಾ.ರಾ.ಮಹೇಶ್ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾರೆ. ಚಾಮುಂಡೇಶ್ವರಿಯಿಂದ ಜಿಟಿಡಿ, ಅವರ ಪುತ್ರ ಜಿ.ಡಿ.ಹರೀಶ್‌ಗೌಡಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ಭರವಸೆ ಸಿಕ್ಕಿದೆ. ಇದಕ್ಕೆ ಎಚ್.ಡಿ.ದೇವೇಗೌಡರ ಸಮ್ಮತಿಯೂ ಸಿಕ್ಕಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜಿಟಿಡಿ ನೇತೃತ್ವದಲ್ಲೇ ಚುನಾವಣೆಗಳನ್ನು ನಡೆಸಲು ವರಿಷ್ಠರು ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶಾಸಕ ಸಾ.ರಾ.ಮಹೇಶ್, ಜಿಟಿಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನವೊಲಿಸುವ ಕೆಲಸ ಮಾಡಿದ್ದಾರೆ. ಇದು ಸದ್ಯಕ್ಕೆ ಫಲ ನೀಡಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಜಿ.ಟಿ.ದೇವೇಗೌಡರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಮುಂದಿನ ರಾಜಕೀಯ ನಡೆ ಕುರಿತು 2-3 ತಿಂಗಳಿನಲ್ಲಿ ತೀರ್ಮಾನ ಪ್ರಕಟಿಸಲಾಗುವುದು.ಜಿ.ಟಿ.ದೇವೇಗೌಡ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net