ಜಿಟಿಡಿ ಎದುರಾಳಿಗಾಗಿ ತಲಾಶ್

chamundeshwari_ JDS_ G.T.Devegowda MLA
Published on

ಮಂಜುನಾಥ ಟಿ.ಭೋವಿ ಮೈಸೂರು

ಕಳೆದ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಅಭ್ಯರ್ಥಿಗಳಿಗಾಗಿ ಶೋಧ ನಡೆಸಿವೆ. ಉಭಯ ಪಕ್ಷಗಳಿಂದ ಅಚ್ಚರಿಯ ಹುರಿಯಾಳುಗಳು ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.

2018ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿ.ಟಿ.ದೇವೇಗೌಡ 36 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಅಂತಯೆ, 2023ರ ಚುನಾವಣೆಯಲ್ಲೂ ಜಿಟಿಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.

ಜಿಟಿಡಿ ಸೋಲಿಸಲು ಪಣ:
ಕಳೆದ ಮೂರು ವರ್ಷಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಜಿಟಿಡಿ ಬಿಜೆಪಿ, ಕಾಂಗ್ರೆಸ್ ಕಡೆ ಒಲವು ತೋರಿದ್ದರು. ಅಲ್ಲಿ ಅಪ್ಪ-ಮಗನಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿ ಆಗುತ್ತಿದ್ದಂತೆಯೇ ಯೂಟರ್ನ್ ಹೊಡೆದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನವೊಲಿಕೆ ಬಳಿಕ ಜೆಡಿಎಸ್‌ನಲ್ಲೇ ಉಳಿದುಕೊಂಡಿದ್ದಾರೆ. ಇದು ಉಭಯ ಪಕ್ಷಗಳಿಗೆ ಸಿಟ್ಟು ತರಿಸಿದ್ದು, ಈ ಸಲ ಹೇಗಾದರೂ ಮಾಡಿ ಜಿಟಿಡಿ ಸೋಲಿಸಬೇಕೆಂದು ಪಣತೊಟ್ಟಿವೆ.
ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಜಿಟಿಡಿ ಸೋಲಿಸುವಂತಹ ಪ್ರಬಲ ಅಭ್ಯರ್ಥಿಗಳು ಸದ್ಯಕ್ಕೆ ಕಾಣುತ್ತಿಲ್ಲ. ವೈಯಕ್ತಿಕ ವರ್ಚಸ್ಸು, ಕ್ಷೇತ್ರದಲ್ಲಿ ಜನ ಬೆಂಬಲ ಹೊಂದಿರುವ ಆಕಾಂಕ್ಷಿಗಳು ಸಹ ಇಲ್ಲಿಲ್ಲ. ಹೀಗಾಗಿ, ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಸಿವೆ. ಅವರು ಯಾರು ಎಂಬುದು ಸದ್ಯಕ್ಕೆ ಕೌತುಕ.

ನಟ ಶಶಿಕುಮಾರ್ ಬರುವವರೇ?:
ಚಿತ್ರನಟ ಶಶಿಕುಮಾರ್ ಅವರನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕರೆತರಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಈ ಸುಳಿವು ಅರಿತುಕೊಂಡ ಬಿಜೆಪಿ, ಶಶಿಕುಮಾರ್ ಅವರನ್ನು ತನ್ನತ್ತ ಸೆಳೆದುಕೊಂಡಿದೆ. ಅಧಿಕೃತವಾಗಿ ಬಿಜೆಪಿಗೆ ಸೇರಿರುವ ಶಶಿಕುಮಾರ್, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಒಲವು ತೊರುತ್ತಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಪರ್ಧೆಗೆ ಮನಸ್ಸು ಮಾಡಿದ್ದಾರೆ. ಈ ಕುರಿತು ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ.

ಕೈನಲ್ಲಿ ಆಕಾಂಕ್ಷಿಗಳು ಹೆಚ್ಚು:
ಕಳೆದ ಬಾರಿಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಸಿದ್ದರಾಮಯ್ಯ ಅವರು, ‘ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಮರಳಿ ವರುಣ ಕ್ಷೇತ್ರಕ್ಕೆ ಹೋಗುವುದು ಬಹುತೇಕ ನಿಶ್ಚಿತವಾಗಿದೆ. ಇದು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ದಾರಿಯನ್ನು ಸುಗಮಗೊಳಿಸಿದೆ. ಹೀಗಾಗಿ, ಪಕ್ಷದಲ್ಲಿ ಟಿಕೆಟ್ ಬಯಸುವವರ ಸಂಖ್ಯೆ ಹೆಚ್ಚಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ 8 ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರ ಹೆಸರು ಮುಂಚೂಣಿಯಲ್ಲಿ ಓಡಾಡುತ್ತಿದೆ. ಉಳಿದಂತೆ, ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣ್‌ಕುಮಾರ್, ಜಿಪಂ ಮಾಜಿ ಸದಸ್ಯ ಕೂರ್ಗಳ್ಳಿ ಮಹದೇವ, ಮುಖಂಡ ರಾಕೇಶ್ ಪಾಪಣ್ಣ, ಸ್ಟೀಲ್ ಉದ್ಯಮಿ ಕೃಷ್ಣಕುಮಾರ್ ಸಾಗರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲೇಖಾ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ನಿರ್ದೇಶಕ ಮಲ್ಲಹಳ್ಳಿ ಮಹದೇವಸ್ವಾಮಿ ಕೈ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳು:
ಬಿಜೆಪಿಯಲ್ಲೂ ಆಕಾಂಕ್ಷಿಗಳ ದಂಡು ಇದೆ. ಪಕ್ಷದ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಅರುಣ್‌ಕುಮಾರ್ ಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ಎಸ್‌ಟಿ ಮೋರ್ಚಾ ಮಾಜಿ ಕಾರ್ಯದರ್ಶಿ ಧನಂಜಯ್, ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಜಿಟಿಡಿಗೆ ಬಂಡಾಯದ ಬಿಸಿ:
ಈ ನಡುವೆ, ಜಿಟಿಡಿ ಮತ್ತು ಜೆಡಿಎಸ್ ವಿರುದ್ಧ ಬಂಡಾಯದ ಬಿರುಗಾಳಿ ಎದ್ದಿದೆ. ಪಕ್ಷದಿಂದ ದೂರ ಉಳಿದಿದ್ದ ಜಿಟಿಡಿ ಮತ್ತೆ ವಾಪಸ್ ಆಗಿರುವುದು ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ನಡೆಯಿಂದ ಸಿಡಿದೆದ್ದಿರುವ ಮುಖಂಡರಾದ ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ, ಕೆಂಪನಾಯಕ, ಬೆಳವಾಡಿ ಶಿವಮೂರ್ತಿ, ಮಾದೇಗೌಡ ಅವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಕೇರ್ಗಳ್ಳಿಯಲ್ಲಿ ಸ್ವಾಭಿಮಾನಿ ಸಭೆ ನಡೆಸಿ, ಜಿಟಿಡಿ ಅವರನ್ನು ಸೋಲಿಸುವ ಶಪಥ ಮಾಡಿದ್ದು, ಈ ಮೂಲಕ ಬಂಡಾಯ ಸಾರಿದ್ದಾರೆ.
ಜೆಡಿಎಸ್ ವಿರುದ್ಧ ಕೆಲಸ ಮಾಡಿದ್ದ ಜಿಟಿಡಿ ಹಾಗೂ ಅವರ ಪುತ್ರ ಹರೀಶ್‌ಗೌಡಗೆ ಟಿಕೆಟ್ ಕೊಡಲು ಮುಂದಾಗಿದ್ದಾರೆ. ಇದು ಕಾರ್ಯಕರ್ತರಿಗೆ ಮಾಡಿದ ಅನ್ಯಾಯ. ಜಿಟಿಡಿಗಾಗಿ ನಾವು ಸಾಕಷ್ಟು ದುಡಿದಿದ್ದು, ಅವರು ನಮಗೆ ಅನ್ಯಾಯ ಮಾಡಿದ್ದಾರೆ. ಇಂಥವರಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ಗುಡುಗಿದ್ದಾರೆ. ಇದು ಶಮನವಾಗದಿದ್ದರೆ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಜಾತಿ ಲೆಕ್ಕಾಚಾರ:
ನಗರವಾಸಿಗಳು, ಗ್ರಾಮವಾಸಿಗಳನ್ನು ಹೊಂದಿರುವ ವಿಶಿಷ್ಟ ಕ್ಷೇತ್ರ ಚಾಮುಂಡೇಶ್ವರಿ. ಮೈಸೂರು ರಿಂಗ್‌ರೋಡ್ ಸುತ್ತಲಿನ ಕೆಲ ಬಡಾವಣೆಗಳು, ಅದರಾಚೆ ಗ್ರಾಮಾಂತರ ಪ್ರದೇಶವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗ, ದಲಿತ ಮತಗಳ ಪ್ರಭಾವ ಅಧಿಕವಾಗಿದೆ. ಜಾತಿ ಸಮೀಕರಣದ ಲೆಕ್ಕಾಚಾರದ ಮೇಲೆ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಸಿದ್ದು ಸೂಚಿಸಿದವರಿಗೆ ಕೈ ಟಿಕೆಟ್:
ಸಿದ್ದರಾಮಯ್ಯ ಅವರು ಸೂಚಿಸುವ ಅಭ್ಯರ್ಥಿಗೆ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ದೊರೆಯಬಹುದು. ಜಿಟಿಡಿ ಸೋಲಿಸಬೇಕೆಂದು ಹಠ ತೊಟ್ಟಿರುವ ಅವರು, ಪ್ರಬಲ ಅಭ್ಯರ್ಥಿಯ ಹುಡುಕಾಟ ನಡೆಸಿದ್ದಾರೆ. ಕ್ಷೇತ್ರದ ಜನರ ನಾಡಿಮಿಡಿತ ಅರಿತುಕೊಳ್ಳಲು ಆಂತರಿಕ ಸಮೀಕ್ಷೆಯನ್ನೂ ನಡೆಸಿದ್ದಾರೆ. ಆದ್ದರಿಂದ ಜಿಟಿಡಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net