ಜಿಕ್ಕಮಗಳೂರು ಡಿಸಿ, ಎಡಿಸಿ ವರ್ಗಾವಣೆಗೆ ಆಗ್ರಹ

1
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಕಪ್ಪು ಪಟ್ಟಿ ಧರಿಸಿ ಗ್ರಾಮಾಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಿ.ಪಿ.ಹರೀಶ್ ನೇತ್ರತ್ವದಲ್ಲಿ ಗ್ರೇಡ್-2 ತಹಸೀಲ್ದಾರ್ ಬಿ.ಆರ್.ಲೋಕೇಶ್ ರವರಿಗೆ ಮನವಿಪತ್ರ ಸಲ್ಲಿಸಿದರು.
Published on

 ಕೆ.ಆರ್.ಪೇಟೆ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕಪ್ಪು ಪಟ್ಟಿ ಧರಿಸಿ ಗ್ರಾಮಾಡಳಿತಾಧಿಕಾರಿಗಳ ಸಂಘದ ತಾಲೂಕು ಘಟಕದಿಂದ ಗ್ರೇಡ್-2 ತಹಸೀಲ್ದಾರ್ ಬಿ.ಆರ್.ಲೋಕೇಶ್‌ಗೆ ಮನವಿಪತ್ರ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಡಿ.ಪಿ.ಹರೀಶ್ ಮಾತನಾಡಿ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರು ಸರ್ಕಾರದ ಕಾನೂನು/ಸುತ್ತೋಲೆಗಳ ವಿರುದ್ಧ, ನಿಯಮಬಾಹಿರ ಆದೇಶಗಳು ಹಾಗೂ ದರ್ಪದ ನಡವಳಿಕೆಗಳ ಕಾರಣದಿಂದಾಗಿ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬ್ರಿಟಿಷ್ ಆಳ್ವಿಕೆ ಮಾದರಿಯಲ್ಲಿ ದುರಾಡಳಿತ ನಡೆಸುತ್ತಿರುವ ಮೀನಾ ನಾಗರಾಜ್ ಮತ್ತು ಕನಕರೆಡ್ಡಿ ಅವರನ್ನು ಕೂಡಲೇ ಚಿಕ್ಕಮಗಳೂರು ಜಿಲ್ಲೆಯಿಂದ ವರ್ಗಾಯಿಸಬೇಕು. ರಾಜ್ಯದ ಯಾವುದೇ ಜಿಲ್ಲೆಗೆ ಜಿಲ್ಲಾಧಿಕಾರಿ/ಅಪರ ಜಿಲ್ಲಾಧಿಕಾರಿಯಾಗಿ ಸ್ಥಳ ನಿಯುಕ್ತಿಗೊಳಿಸದೆ ಕಾನೂನು ಬಾಹಿರ ಮತ್ತು ಅಧೀನ ನೌಕರ ವಿರೋಧಿ ಆದೇಶಗಳನ್ನು ವಿಚಾರಣೆ ನಡೆಸಿ ಕ್ರಮ ಕೈಗೊಂಡು ನೌಕರರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಅವರನ್ನು ವರ್ಗಾವಣೆ ಮಾಡದಿದ್ದಲ್ಲಿ ಫೆ.3 ರಿಂದ ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬಗೆಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ತಾಲೂಕು ಕಚೇರಿ/ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಸ್ವಾಮಾಚಾರಿ, ತಾಲೂಕು ಅಧ್ಯಕ್ಷ ದಶರಥ ಪೂಜಾರಿ, ಉಪಾಧ್ಯಕ್ಷ ರಾಘವೇಂದ್ರ, ಮಹಿಳಾ ಉಪಾಧ್ಯಕ್ಷೆ ಕೆ.ಸಾವಿತ್ರಿ, ಪ್ರಧಾನ ಕಾರ್ಯದರ್ಶಿ ಹೊನ್ನೇಶ, ಖಜಾಂಚಿ ಕಾವ್ಯಗೌಡರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನೀಲ್ ಗಾಣಿಗರ್, ಗ್ರಾಮ ಆಡಳಿತಾಧಿಕಾರಿ ಪೂಜಾ, ಕೆ.ಸುಧಾಕರ, ಸುನೀಲ್ ಶಿರಸಂಗಿ, ಲೋಹಿತ್ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net