ಜಿಐಎಸ್ ವೈಮಾನಿಕ ಸಮೀಕ್ಷೆ ಪೂರ್ಣ

GIS
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಅವಳಿ ನಗರದಲ್ಲಿನ ಸ್ಥಿರಾಸ್ತಿಗಳನ್ನು ನಿಖರವಾಗಿ ಗುರುತಿಸಲು ಕೈಗೆತ್ತಿಕೊಂಡಿರುವ 3ಡಿ ಮ್ಯಾಪಿಂಗ್ ಜಿಐಎಸ್ (ಜಿಯೋಗ್ರಾಫಿಕಲ್ ಇನ್​ಫಾರ್ವೆಶನ್ ಸಿಸ್ಟಮ್​ಭೌಗೋಳಿಕ ಮಾಹಿತಿ ವ್ಯವಸ್ಥೆ) ಸರ್ವೆಯಡಿ 10 ದಿನಗಳ ಮೈಮಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ.

ಲೀಡಾರ್ ಸೆನ್ಸಾರ್ ಅಳವಡಿಸಿದ ವಿಮಾನವು ಅವಳಿ ನಗರದ ಆಗಸದಲ್ಲಿ ಹಾರಾಡುವ ಮೂಲಕ ಸಮೀಕ್ಷೆ ನಡೆಸಿವೆ. ಈ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ತಿಳಿಸಿದ್ದಾರೆ.

ವಿಶೇಷವಾದ ನಾದಿರ್ ಮತ್ತು ಒಬ್ಲಿಕ್ ಕ್ಯಾಮೆರಾಗಳನ್ನು ಹೊಂದಿದ ವಿಮಾನಗಳು ಹಾರಾಟದ ವೇಳೆ ನಗರದ ಉದ್ದಕ್ಕೂ ಉನ್ನತ ಗುಣಮಟ್ಟದ ಚಿತ್ರಗಳು ಹಾಗೂ ಭೌಗೋಳಿಕ ಅಂಶಗಳನ್ನು ಸೆರೆಹಿಡಿದಿವೆ. ಇವುಗಳನ್ನು ವಿಶ್ಲೇಷಿಸಿ ಟ್ರ್ಯೂ ಆಥೋ ಇಮೇಜ್​ಗಳನ್ನು ಮತ್ತು 3ಡಿ ಚಿತ್ರಗಳನ್ನು ಸಿದ್ಧಪಡಿಸಲಾಗುತ್ತದೆ.

ಮುಂದಿನ ಹಂತದಲ್ಲಿ ನೆಲ ಮಟ್ಟದ ಸಮೀಕ್ಷೆ ಹಾಗೂ ಡೇಟಾ ವಿಶ್ಲೇಷಣೆ ನಡೆಯಲಿದೆ. ಈಗಾಗಲೇ 500 ಕಿ.ಮೀ. ನಷ್ಟು ನೆಲ ಮಟ್ಟದ ಸಮೀಕ್ಷೆ ಪೂರ್ಣಗೊಂಡಿದೆ. ಸುಮಾರು 3000 ಕಿ.ಮೀ. ನಷ್ಟು ನೆಲ ಮಟ್ಟದ ಸಮೀಕ್ಷೆ ಕೈಗೊಳ್ಳಬೇಕಿದೆ. ಸಣ್ಣ ಗಲ್ಲಿಗಳಲ್ಲಿನ ಆಸ್ತಿಗಳನ್ನು ದ್ವಿಚಕ್ರ ವಾಹನಗಳು, ಅಗಲವಾದ ರಸ್ತೆಗಳಲ್ಲಿ ಸ್ಕಾರ್ಪಿಯೋ, ಬೊಲೆರೊದಂತಹ ವಾಹನಗಳಲ್ಲಿ 3ಡಿ ಪನೋರಮಾ ವೀವ್ ಸೆನ್ಸರ್ ಮೂಲಕ ಚಿತ್ರಗಳನ್ನು ಸೆರೆಹಿಡಿಯಲಾಗುವುದು. ನಂತರ ಅವಳಿ ನಗರದ 3ಡಿ ಮಾದರಿ ರೂಪಿಸಲಾಗುತ್ತದೆ.

ಹು-ಧಾ ಅವಳಿ ನಗರದ ಪ್ರತಿ ಮನೆಗೂ ಜಿಐಎಸ್ ತಾಂತ್ರಿಕ ತಂಡ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ತೆರಳಿ ಮೊಬೈಲ್ ಆಪ್​ನಲ್ಲಿ ಆಸ್ತಿಗಳ ಮಾದರಿ, ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇನ್ನಿತರ ಮಾಹಿತಿಯನ್ನು ದಾಖಲಿಸುತ್ತಾರೆ. ಇದಕ್ಕಾಗಿ ಸ್ಮಾರ್ಟ್​ಸಿಟಿಯ ಐ-ಸಿಸಿಸಿ ಕಟ್ಟಡದಲ್ಲಿ ಜಿಐಎಸ್ ಸರ್ವೆಯ ಕಚೇರಿ ತೆರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net