ಜಿಐಎಸ್ ವೆಬ್‌ಪೋರ್ಟಲ್ ಭೌಗೋಳಿಕ ಮಾಹಿತಿ ; ಜಿಲ್ಲೆಯ ನಿಖರ ಮಾಹಿತಿ ಸಂಗ್ರಹ ;ಸಂಸದ ಜಿ.ಎಸ್.ಬಸವರಾಜು ಸಮ್ಮುಖದಲ್ಲಿ ದಿಶಾ ಸಮಿತಿ ಸಭೆ

22Tmk_Disha_Meeting
Published on

ತುಮಕೂರು: ಜಿಲ್ಲೆಯ ಎಲ್ಲ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳು ಹಾಗೂ ಇಲಾಖೆಗಳ ಸ್ವತ್ತುಗಳ ಮಾಹಿತಿ ಒದಗಿಸುವ ತುಮಕೂರು ಜಿಐಎಸ್ ವೆಬ್‌ಪೋರ್ಟ್‌ಲ್ ಹಾಗೂ ಶುದ್ಧನೀರು ಮೊಬೈಲ್ ಅಪ್ಲಿಕೇಷನ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ, ವೆಬ್ ಪೋರ್ಟ್‌ಲ್‌ಗೆ

ಚಾಲನೆ ನೀಡಿ ಮಾತನಾಡಿದ ಸಂಸದ ಜಿ.ಎಸ್.ಬಸವರಾಜು, ಜಿಲ್ಲೆಯ ಗ್ರಾಮ ಮಟ್ಟದಿಂದ ಹಿಡಿದು ಸಕಲ ಮಾಹಿತಿಯನ್ನು ಪ್ರಾಥಮಿಕ ಹಂತದಿಂದ ಸಂಗ್ರಹಿಸಿ ಲೋಪವಿಲ್ಲದಂತೆ ಪಾರದರ್ಶಕವಾಗಿ ಕಾಲಕಾಲಕ್ಕೆ ಜಿಐಎಸ್ ವೆಬ್‌ಪೋರ್ಟಲ್‌ಗೆ ಅಪ್ಲೋಡ್ ಮಾಡಬೇಕು. ಸ್ವಾತಂತ್ರ್ಯ ನಂತರ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಖರ ಮಾಹಿತಿಯನ್ನೂ ಅಳವಡಿಸಬೇಕು. ಈ ಕಾರ್ಯಾನುಷ್ಠಾನದಿಂದ ಸಮರ್ಪಕ ಅನುದಾನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆಯುವ ಮೂಲಕ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮ ಅನುಷ್ಠಾನ ಕುರಿತು ಮಾಹಿತಿ ನೀಡಿದ ಯೋಜನಾ ನಿರ್ದೇಶಕ ಎಂ.ಜಯಚಂದ್ರನ್, ಭೌಗೋಳಿಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯಡಿ ಜಿಐಎಸ್ ವೆಬ್‌ಪೋರ್ಟಲ್ ಮೂಲಕ ಜಿಲ್ಲೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು. ಜಿಐಎಸ್ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ನಗರ, ಪಟ್ಟಣ, ಹೋಬಳಿ, ಗ್ರಾಪಂಚಾಯಿತಿ ಹಾಗೂ ಸರ್ವೇ ನಂಬರ್ ಪ್ರಕಾರ ಸಂಪರ್ಕ ರಸ್ತೆ, ಸರ್ಕಾರದ ಇಲಾಖೆ, ಕಚೇರಿ ಇಲಾಖೆಗಳ ಯೋಜನಾವಾರು ಕಾರ್ಯಕ್ರಮಗಳ ಅಂಕಿಅಂಶಗಳನ್ನು ಅಳವಡಿಸಲಾಗುವುದು ಎಂದರು.

ತುಮಕೂರು ಜಿಐಎಸ್ ಪೋರ್ಟಲ್ ಅಭಿವೃದ್ಧಿಪಡಿಸಿ ಅದರಲ್ಲಿ ಮಾಹಿತಿ ಸಂಗ್ರಹಿಸುವ ಗುರಿ ಎಲ್ಲರ ಸಹಕಾರದಿಂದ ಸಾಕಾರಗೊಂಡಿದೆ. ಜಿಲ್ಲೆಯ ಎಲ್ಲ ಇಲಾಖೆಗಳು ಸಂಪೂರ್ಣ ಮಾಹಿತಿ ಅಪ್ಡೇಟ್ ಮಾಡಬೇಕು. ಅಪ್ಡೇಟ್ ಆಗದೆ ಉಳಿದಿರುವ ಮಾಹಿತಿಯನ್ನು ಅಪ್ಡೇಟ್ ಮಾಡಿ ನೂರರಷ್ಟು ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಪಂ ಸಿಇಒ ಶುಭಾ ಕಲ್ಯಾಣ್ ಹೇಳಿದರು.

ಜಿಐಎಸ್ ಲೈವ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಅದರ ಅಪ್ಡೇಟ್ ಬಗ್ಗೆ ಪ್ರತಿನಿತ್ಯ ಮಾಹಿತಿ ನೀಡಬೇಕು. ಜಿಪಂ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ (ವಾರ್) ಕೊಠಡಿ ಮಾಡಿದರೆ ಸೂಕ್ತವಾಗಲಿದೆ ಎಂದು ಸಲಹೆ ನೀಡಿದರು. ಜಿಪಂ ಕಚೇರಿಯಲ್ಲಿ ವಾರ್ ರೂಂ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜು ತಿಳಿಸಿದರು.

ಉಪವಿಭಾಗಾಧಿಕಾರಿ ಅಜಯ್, ಎಎಸ್ಪಿ ಟಿ.ಜೆ.ಉದೇಶ್, ದಿಶಾ ಸಮಿತಿ ಸದಸ್ಯರಾದ ಕೆ.ಎನ್. ಲೋಕೇಶ್ವರಿಪ್ರಭು, ರಘೋತ್ತಮರಾವ್, ಗೋವಿಂದ್ ರಾವ್, ಪ್ರೇಮಾ ಹೆಗಡೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸಭೆಯಲ್ಲಿ ಡಿಎಚ್‌ಒ ಸ್ಪಷ್ಟನೆ: ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿಲ್ಲ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ನೀವು ಲಸಿಕೆ ತೆಗೆದುಕೊಂಡಿಲ್ಲವಾ ಎಂದು ಡಿಎಚ್‌ಒ ನಾಗೇಂದ್ರಪ್ಪ ಅವರನ್ನು ಸಂಸದ ಜಿ.ಎಸ್.ಬಸವರಾಜು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ, ನಾನು ಲಸಿಕೆ ಪಡೆದಿದ್ದೇನೆ. ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಈವರೆಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ ಎಂದರು.

ರಾಜ್ಯದ ಮೊದಲ ವೆಬ್ ಪೋರ್ಟಲ್: ತುಮಕೂರು ಜಿಐಎಸ್ ವೆಬ್ ಪೋರ್ಟಲ್ ರಾಜ್ಯದ ಮೊದಲ ವೆಬ್ ಪೋರ್ಟಲ್ ಆಗಿದ್ದು, ಜಿಲ್ಲೆಯ ಎಲ್ಲ ಅಂಕಿಅಂಶಗಳನ್ನೊಳಗೊಂಡಂತೆ ಇಲಾಖಾವಾರು, ಯೋಜನವಾರು ಮಾಹಿತಿ ಅಳವಡಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಜಿಐಎಸ್ ಪೋರ್ಟಲ್‌ನಲ್ಲಿ 40 ಇಲಾಖೆಗಳ 270ಕ್ಕೂ ಅಧಿಕ ಲೇಯರ್ ಮಾಹಿತಿಯನ್ನು ಕೇಂದ್ರೀಕರಿಸಲಾಗಿದೆ ಎಂದು ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net