ಜಿಎಸ್‌ಟಿ ಹೇರಿಕೆ ಬಡವರಿಗೆ ಹೊರೆ: ಕೇಂದ್ರ ಸರ್ಕಾರದ ವಿರುದ್ಧ ಆಪ್ ಕಿಡಿ

SOR WEB
Published on

ಸೊರಬ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದಿನಬಳಕೆ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ತಾಲೂಕು ಕಚೇರಿ ಎದುರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಸಂಚಾಲಕ ಎಚ್.ರವಿಕುಮಾರ್ ಮಾತನಾಡಿ, ಬಿಜೆಪಿ ಜನರ ಗಮನವನ್ನು ಧರ್ಮ, ದೇವಸ್ಥಾನ, ಪಾಕಿಸ್ತಾನದೆಡೆಗೆ ಸೆಳೆದು ಜೇಬಿಗೆ ಕತ್ತರಿ ಹಾಕುತ್ತಿದೆ. ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿರುವುದು ಮಧ್ಯಮ ಮತ್ತು ಬಡ ವರ್ಗದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಮಂಜುನಾಥ ಉಪ್ಪಳ್ಳಿ ಮಾತನಾಡಿ, ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಜೆಎಸ್‌ಟಿ ಹೇರಿಕೆಯಿಂದ ಜನಸಾಮಾನ್ಯರಿಗೆ ತೊಂದರೆ ನೀಡಿದೆ. ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಹೇರಿರುವ ಜಿಎಸ್‌ಟಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕ್ಷೇತ್ರದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಶಾಲೆ, ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಸಾಗರ, ಸಿದ್ದಾಪುರ, ಶಿಕಾರಿಪುರಕ್ಕೆ ಚಿಕಿತ್ಸೆಗೆ ತೆರಳುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯದಿಂದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದರು.

ಪಕ್ಷದ ಪ್ರಮುಖರಾದ ಕೆ.ಕಿರಣ್, ಬಿ.ಆರ್.ಬಸವರಾಜ, ಟಿ.ನೇತ್ರಾವತಿ, ಡಿ.ಆರ್.ಲಕ್ಷ್ಮೇಶ, ಬಿ.ಕೆ.ರಮೇಶ್ ಭದ್ರಾವತಿ, ದಾನಪ್ಪ ನಾಯ್ಕ, ಎಂ.ಕೆ.ಮೋಹನ, ಲಕ್ಷ್ಮಣಪ್ಪ, ಪಿ.ಟಿ.ರವಿ, ಎಚ್.ಭರತ್, ಹೇಮಪ್ಪ, ಗಣೇಶ, ರಮೇಶ ನಾಯ್ಕ, ನಾಗರಾಜ ನಾಯ್ಕ, ಸೋಮಪ್ಪ ನಾಯ್ಕ, ಈರಾ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net