

ಮೈಸೂರು: ಆಹಾರ ಪದಾರ್ಥಗಳು ಮತ್ತು ಕೃಷಿ ಸಲಕರಣೆಗಳ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಮೈಸೂರು ತಾಲೂಕಿನ ಜಯಪುರ ನಾಡಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಎಲ್ಲ ಬೆಲೆಗಳು ಗಗನಕ್ಕೇರುತ್ತಿವೆ. ಜೀವನ ನಡೆಸಲು ಸಾಮಾನ್ಯ ಜನರು ಹೆಣಗಾಡುವಂತಾಗಿದೆ. ರೈತರಿಗೆ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿರುವುದು ಸಂಕಷ್ಟದಲ್ಲಿರುವ ಜನರ ಮೇಲೆ ಬರೆ ಎಳೆದಂತಾಗಿದೆ. ಇದೀಗ ಆಹಾರ ಪದಾರ್ಥಗಳು, ಕೃಷಿ ಉಪಕರಣದ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿದೆ. ಕೇಂದ್ರ ಸರ್ಕಾರದ ಹಲವಾರು ನೀತಿಗಳು ಜನರ ಬದುಕನ್ನು ನಿರಾಶೆಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರೃದ ಅಮೃತ ಮಹೋತ್ಸವ ಸಂದರ್ಭದಲ್ಲಿ ರೈತರ, ಕಾರ್ಮಿಕರ ಮತ್ತು ದುಡಿಯುವ ವರ್ಗದವರ ಬದುಕು ಹೀನಾಯ ಸ್ಥಿತಿಗೆ ತಲುಪುವಂತೆ ಮಾಡುವ ಎಲ್ಲ ರೀತಿಯ ನೀತಿಗಳು ಜಾರಿಗೆ ಬರುತ್ತಿರುವುದು ಆತಂಕ ಮೂಡಿಸುತ್ತಿದೆ. ಅನ್ನ ನೀಡುವ ಅನ್ನದಾತ, ಕೃಷಿ ಬಿಕ್ಕಟ್ಟಿನ ಫಲವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಭೂಮಿ ಹಂಚಿಕೆ, ನೀರಾವರಿ ಸೌಲಭ್ಯ ವಿಸ್ತರಣೆ, ಬ್ಯಾಂಕ್‌ಗಳಲ್ಲಿ ಬಡ್ಡಿ ರಹಿತ ಸಾಲ ನೀಡುವುದು. ಗುಣಮಟ್ಟದ ಬೀಜ, ಗೊಬ್ಬರ, ಮಾರುಕಟ್ಟೆಯ ರಕ್ಷಣೆ ಇತ್ಯಾದಿ ಸೌಲಭ್ಯವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಬೇಕು. ಆದರೆ, ರೈತರು, ಕೃಷಿ ಕೂಲಿಕಾರರನ್ನು ಕೃಷಿಯಿಂದ ಹೊರಗೆ ಹಾಕಿ, ಕಂಪನಿ ಕೃಷಿಯನ್ನು ಜಾರಿಗೊಳಿಸಲಾಗಿದೆ. ಆ ಮೂಲಕ ಹೊಲ, ಗದ್ದೆಗಳಲ್ಲಿಯೇ ರೈತರನ್ನು ಕಾರ್ಪೊರೇಟ್ ಕಂಪನಿಗಳ ಜೀತದಾಳುಗಳನ್ನಾಗಿ ಮಾಡಲು ನೀತಿ ರೂಪಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಆಸ್ತಿ ಆಗಿರುವ ವಿದ್ಯುತ್ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ವಿದ್ಯುತ್ ಕಾಯ್ದೆ-2021 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಇದರ ಪರಿಣಾಮವಾಗಿ ರೈತರ ಪಂಪಸೆಟ್‌ಗಳು, ಭಾಗ್ಯಜ್ಯೋತಿ, ಕುಠೀರ ಜ್ಯೋತಿ ಯೋಜನೆಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಅನ್ನು ನಿಲ್ಲಿಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ರೈತರು ಮಾಡಿದ ಹೋರಾಟದ ಸಂದರ್ಭದಲ್ಲಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಉಳಿಕೆ ಹಕ್ಕೊತ್ತಾಯಗಳನ್ನು ಈಡೇರಿಸಲು ಕ್ರಮ ವಹಿಸುವುದಾಗಿ ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಅದೀಗ ಹುಸಿಯಾಗುವ ಮೂಲಕ ರೈತ ಸಮುದಾಯಕ್ಕೆ ದ್ರೋಹ ವೆಸಗಿದೆ ಎಂದು ಕಿಡಿಕಾರಿದರು.
ಬೇಡಿಕೆಗಳು: ಆಹಾರ ಪದಾರ್ಥಗಳ ಮತ್ತು ಕೃಷಿ ಸಲಕರಣೆಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳಬೇಕು. ವಿದ್ಯುತ್ ಮಸೂದೆ 2021 ಅನ್ನು ರದ್ದುಗೊಳಿಸಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಜಾರಿ ಮಾಡಬೇಕು. ರೈತರ ಮೇಲಿನ ಸುಳ್ಳು ಮೊಕದ್ದಮೆ ವಾಪಸ್ ಪಡೆಯಬೇಕು. ಉತ್ತರಪ್ರದೇಶದ ಲಖೀಂಪುರ್‌ಖೇರಿ ರೈತರ ಹತ್ಯಾಕಾಂಡದ ಪ್ರಮುಖ ಆರೋಪಿ ಸಚಿವ ಅಜಯ್ ಮಿಶ್ರಾರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಿ, ಶಿಕ್ಷೆಗೆ ಒಳಪಡಿಸಬೇಕು.ದೆಹಲಿ ಹೋರಾಟದಲ್ಲಿ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು. ಪೆಟ್ರೋಲ್, ಡಿಸೇಲ್, ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ ಶಿವಪ್ರಸಾದ್, ಜಿಲ್ಲಾ ಸಂಚಾಲಕ ಎಚ್.ಎಂ.ಬಸವರಾಜು, ರೈತರಾದ ಪಾಪೇಗೌಡ, ಬಸವಗೌಡ, ಸಿದ್ದೇಶ, ಗೋವಿಂದ ನಾಯಕ ಮುಂತಾದವರು ಇದ್ದರು.