

ಹುಬ್ಬಳ್ಳಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯ ಬಳಿಕ ವರ್ತಕರಲ್ಲಿ ಹಾಗೂ ಗ್ರಾಹಕರಲ್ಲಿ ಕರ ಪಾವತಿಸುವ ಪ್ರವೃತ್ತಿ ಹೆಚ್ಚುತ್ತಿದ್ದು ವರಮಾನ ಸಂಗ್ರಹ ಅಧಿಕಗೊಳ್ಳಲು ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿಯ ಕೆಸಿಸಿಐ ಸಭಾಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯತೆರಿಗೆ ಸಲಹೆಗಾರರ ಸಂಘ (ಬೆಂಗಳೂರು/ಹುಬ್ಬಳ್ಳಿ)ದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ತಿಂಗಳು ಗುರಿ ಮೀರಿ ಜಿಎಸ್ಟಿ ವರಮಾನ ಸಂಗ್ರಹವಾಗುತ್ತಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿ ಸಂಪೂರ್ಣವಾಗಿ ಹೋದರೆ ಆದಾಯ ಸಂಗ್ರಹ ಇನ್ನಷ್ಟು ಜಾಸ್ತಿ ಆಗಲಿದೆ ಎಂದರು.
ಮೊದಲೆಲ್ಲ ಮಧ್ಯಮ ವರ್ಗದ ಬಹಳಷ್ಟು ಜನರಲ್ಲಿ ತೆರಿಗೆ ತಪ್ಪಿಸುವ ಪ್ರವೃತ್ತಿ ಇತ್ತು. ಮಾರಾಟ ಮಾಡಿದ ವಸ್ತುಗಳಿಗೆ ವರ್ತಕರು ಬಿಲ್ ಕೊಡುತ್ತಿರಲಿಲ್ಲ. ಗ್ರಾಹಕರು ಬಿಲ್ ಪಡೆಯುತ್ತಿರಲಿಲ್ಲ. ಜಿಎಸ್ಟಿ ವ್ಯಾಪ್ತಿಗೆ ಬಂದ ಬಳಿಕ ತೆರಿಗೆ ಪಾವತಿಸುವ ಪ್ರವೃತ್ತಿ ಬೆಳೆದಿದೆ. ತೆರಿಗೆ ಪಾವತಿಸುವ ಪದ್ಧತಿಯು ಇನ್ನಷ್ಟು ಸರಳೀಕರಣಗೊಳ್ಳುವ ರೀತಿಯಲ್ಲಿ ಹಾಗೂ ಲೋಪದೋಷಗಳನ್ನು ಸರಿಪಡಿಸುವಂತೆ ತೆರಿಗೆ ಸಲಹೆಗಾರರು ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.
ಆದಾಯಕ್ಕೆ ತೆರಿಗೆಯೇ ಮೂಲ. ತೆರಿಗೆ ಸಲಹೆಗಾರರು ವರ್ತಕರಿಗೆ ಪ್ರಾಮಾಣಿಕ ಸಲಹೆಗಳನ್ನು ನೀಡಬೇಕು. ಜಿಎಸ್ಟಿ ಜಾರಿಗೆ ಪೂರ್ವ ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆ ಪದ್ಧತಿ ಇದ್ದವು. ಜಿಎಸ್ಟಿ ಜಾರಿಗೊಳಿಸಿದ ಕೆಲ ತಿಂಗಳುಗಳು ಗೊಂದಲಗಳಿದ್ದರೂ ಅವೆಲ್ಲ ಈಗ ಸುಗಮಗೊಂಡಿವೆ. ತೆರಿಗೆ ಸಲಹೆಗಾರರ ಸಲುವಾಗಿ ಕಲ್ಯಾಣ ನಿಧಿ ಸ್ಥಾಪಿಸುವಂತೆ ಮುಖ್ಯಮಂತ್ರಿಯವರಲ್ಲಿ ಒತ್ತಾಯ ಮಾಡುತ್ತೇನೆ ಎಂದರು.
ಸಂಘದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ಟಿ. ಅಕ್ಕಿ, ಬೆಳಗಾವಿ ವಲಯ ಉಪಾಧ್ಯಕ್ಷ ಮಹಾಂತೇಶ ದಾಡಿಗುಂಡಿ, ಧಾರವಾಡ ಜಿಲ್ಲಾ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಇದ್ದರು. ತನುಶ್ರೀ ಕುಲಕರ್ಣಿ ಹಾಗೂ ಪಲ್ಲವಿ ಲಿಂಬಿಕಾಯಿ ಪ್ರಾರ್ಥನೆ ಹಾಡಿದರು. ರಾಜ್ಯ ಸಂಘದ ಕಾರ್ಯದರ್ಶಿ ಮುಕುಂದ ಪೋತ್ನೀಸ್ ಸ್ವಾಗತಿಸಿದರು. ಅಧ್ಯಕ್ಷ ಎಸ್. ನಂಜುಂಡಪ್ರಸಾದ ಪ್ರಾಸ್ತಾವಿಕ ಮಾತನಾಡಿದರು.